ಉಡುಪಿ: ಸೌಹಾರ್ದ ಸಹಕಾರಿ ಕ್ಷೇತ್ರ ಸಹಕಾರ ಚಳುವಳಿಗೆ ಹೊಸ ಚೈತನ್ಯವನ್ನು ನೀಡಿದೆ. ರಾಜ್ಯದಲ್ಲಿ 6514 ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದ ಸೌಹಾರ್ದ ಸಹಕಾರಿಗಳಲ್ಲಿ 1683ಕ್ಕೂ ಹೆಚ್ಚು ಇ-ಸ್ಟ್ಯಾಂಪಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಬೊಕ್ಕಸಕ್ಕೆ ಪ್ರತಿದಿನ 2 ಕೋಟಿಗೂ ಹೆಚ್ಚು ರಾಜಸ್ವವನ್ನು ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ಅಧ್ಯಕ್ಷ ಜಿ. ನಂಜನಗೌಡ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ 72 ಲಕ್ಷಕ್ಕೂ ಹೆಚ್ಚು ಸದಸ್ಯರು ತೊಡಗಿಸಿಕೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ. ರೂ. 1630 ಕೋಟಿ ಪಾಲು ಬಂಡವಾಳ, ರೂ. 44,793 ಕೋಟಿ ಠೇವಣಿ, ರೂ. 3,992 ಕೋಟಿ ನಿಧಿಗಳು, ರೂ. 35,747 ಕೋಟಿ ಸಾಲ, ರೂ. 51.064 ಕೋಟಿ ದುಡಿಯುವ ಬಂಡವಾಳ ಹಾಗೂ ರೂ. 735 ಕೋಟಿ ಲಾಭ ಈ ಕ್ಷೇತ್ರದ ಹೆಗ್ಗಳಿಕೆಯಾಗಿದೆ ಎಂದರು.
ಸಾಮಾನ್ಯ ಸೇವಾ ಕೇಂದ್ರಗಳು ರಾಷ್ಟ್ರೀಯ ಇ-ಗರ್ವನೆನ್ಸ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 2006ರಲ್ಲಿ ಅನುಮೋದಿತವಾಗಿದೆ. ಈ ಯೋಜನೆಯ ಪ್ರಕಾರ 6 ಲಕ್ಷ ಹಳ್ಳಿಗಳನ್ನು ಸರ್ವೆ ಮಾಡಿ ಗ್ರಾಮಾಂತರ ಜನರಿಗೆ ಅಗತ್ಯವಿರುವ ಸೇವೆಗಳನ್ನು ಇ-ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಹಾಗೂ ಈ ಸೇವೆಗಳನ್ನು ತೆಗೆದುಕೊಳ್ಳುವ ಸಂಸ್ಥೆಗಳ ಮೂಲಕ ಒದಗಿಸುವ ಕಾರ್ಯಕ್ರಮ ಇದಾಗಿದೆ.
ಈ ಯೋಜನೆ ಅಡಿಯಲ್ಲಿ ವಿಮೆ ವಿಭಾಗದಲ್ಲಿ ಸುಮಾರು 19ಕ್ಕೂ ಹೆಚ್ಚು ಸಂಸ್ಥೆಗಳು ರೈಲ್ವೆ ಬುಕಿಂಗ್ ಹಾಗೂ ಬುಕಿಂಗ್ ಕಿಟ್ ವಿಭಾಗಗಳು ಹೀಗೆ ಹಲವು ಯೋಜನೆಗಳನ್ನು ಈ ಮೂಲಕ ತೆಗೆದುಕೊಂಡು ಜನ ಸಾಮಾನ್ಯ ಜನರಿಗೆ ಸೇವೆ ನೀಡಬಹುದಾಗಿದೆ. ಈ ಎಲ್ಲಾ ಯೋಜನೆಗಳನ್ನು ನಮ್ಮ ಸೌಹಾರ್ದ ಸಹಕಾರಿಗಳು ಜಾರಿ ಮಾಡುವುದಕ್ಕಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಹೊಂದಿ ಪ್ರತಿಯೊಂದು ವಿಭಾಗದ ಸೇವೆಗೂ ನೋಂದಣಿ ಮಾಡಿಕೊಂಡು ಕಾರ್ಯನಿರ್ವಹಿಸಬಹುದಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಮಂಜುನಾಥ, ಭಾರತಿ ಜಿ ಭಟ್, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ ಪಾಟೀಲ, ಜಿಲ್ಲಾಧ್ಯಕ್ಷ ಭಾಸ್ಕರ್ ಕಾಮತ್, ಜಗನ್ನಾಥ್ ಶೆಟ್ಟಿ ಇದ್ದರು.

