ಉಡುಪಿ: ಸಮುದ್ರದಲ್ಲಿ ಬಿಟ್ಟಿದ್ದ ಮಾರಣಬಲೆ ತರಲು ಹೋಗಿದ್ದ ಮೀನುಗಾರನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪಾರಂಪಳ್ಳಿ- ಪಡುಕರೆ ಕಡಲ ತೀರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಮೃತ ಮೀನುಗಾರನನ್ನು ಭಾಸ್ಕರ ಪೂಜಾರಿ (55) ಎಂದು ಗುರುತಿಸಲಾಗಿದೆ. ಅವರು ಇಂದು ಮಧ್ಯಾಹ್ನ ಪಾರಂಪಳ್ಳಿಯ ಮರಿನಾ ಮನೆ ಗೆಸ್ಟ್ ಹೌಸ್ ಸಮೀಪ ಸಮುದ್ರದಲ್ಲಿ ಬಿಟ್ಟಿದ್ದ ಮಾರಣಬಲೆಯನ್ನು ಮೇಲೇತ್ತಲು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಅವರು ಕೊಚ್ಚಿ ಹೋಗಿದ್ದರು.

ತಕ್ಷಣವೇ ಮಲ್ಪೆ ಕರಾವಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸತೀಶ್ ಮತ್ತು ಸುದರ್ಶನ್ ಎಸ್. ಕುಂದರ್ ಅವರು ಸಮುದ್ರಕ್ಕೆ ಹಾರಿ ದಡಕ್ಕೆ ತಂದರು. ಬಳಿಕ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತು‌. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಭಾಸ್ಕರ್ ಪೂಜಾರಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.