ಉಡುಪಿ: ಸರ್ಕಾರದ ಅಮೂಲ್ಯ ಆಸ್ತಿಯೊಂದು ನಿರ್ಲಕ್ಷ್ಯದ ಕಾರಣದಿಂದ ಇಂದು ಪಾಳು ಬಿದ್ದಿದೆ. ಉಡುಪಿ ನಗರದ ಹೃದಯಭಾಗವಾದ ಬನ್ನಂಜೆಯಲ್ಲಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಒಂದೊಮ್ಮೆ ಜಿಲ್ಲೆಯ ಆಡಳಿತದ ಕೇಂದ್ರಬಿಂದುವಾಗಿತ್ತು.

ಆದರೆ ಇಂದು ಅದೇ ಕಟ್ಟಡ ಶಿಥಿಲಗೊಂಡು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಕಟ್ಟಡವನ್ನು ಮರುಬಳಕೆ ಮಾಡಬೇಕು ಅಥವಾ ಹೊಸ ಕಟ್ಟಡ ನಿರ್ಮಿಸಿ ಸಾರ್ವಜನಿಕ ಸೇವೆಗೆ ಬಳಸಬೇಕು ಎಂಬ ಆಗ್ರಹ ಇದೀಗ ಜೋರಾಗಿದೆ.

ಇದು ಉಡುಪಿ ನಗರದ ಬನ್ನಂಜೆಯಲ್ಲಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿ.ಒಂದೊಮ್ಮೆ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದ ಈ ಕಟ್ಟಡ, ಇಂದು ತನ್ನ ವೈಭವ ಕಳೆದುಕೊಂಡು ಶಿಥಿಲಾವಸ್ಥೆಗೆ ತಲುಪಿದೆ. ಹಲವು ವರ್ಷಗಳಿಂದ ನಿರ್ವಹಣೆ ಕಾಣದ ಈ ಕಟ್ಟಡದ ಗೇಟ್‌ಗಳು ಮುರಿದು ಬಿದ್ದಿವೆ. ಬಾಗಿಲು, ಕಿಟಕಿಗಳು ಹಾಳಾಗಿವೆ.

ಕಟ್ಟಡದ ಹಲವೆಡೆ ಗೋಡೆಗಳು ಬಿರುಕು ಬಿಟ್ಟಿದ್ದು, ಒಳಭಾಗ ಸಂಪೂರ್ಣ ನಿರ್ಜನವಾಗಿದೆ.ನಿರ್ಲಕ್ಷ್ಯದ ಪರಿಣಾಮ ಈ ಪ್ರದೇಶ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸರ್ಕಾರದ ಅಮೂಲ್ಯ ಆಸ್ತಿ ಹೀಗೆ ಹಾಳಾಗುತ್ತಿರುವುದಕ್ಕೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವೇಳೆ, ಈ ಕಟ್ಟಡವನ್ನು ದುರಸ್ತಿ ಮಾಡಿ ಶಾಲಾ ಮಕ್ಕಳ ವಸತಿ ನಿಲಯವಾಗಿ, ಸಾರ್ವಜನಿಕ ಉಪಯೋಗದ ಕೇಂದ್ರವಾಗಿ ಅಥವಾ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳನ್ನು ಇಲ್ಲಿ ಸ್ಥಳಾಂತರಿಸಿ ಸದುಪಯೋಗಪಡಿಸಿಕೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ದುರಸ್ತಿ ಸಾಧ್ಯವಾಗದಿದ್ದರೆ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಅದೇ ಜಾಗದಲ್ಲಿ ಆಧುನಿಕ ಸರ್ಕಾರಿ ಕಟ್ಟಡ ನಿರ್ಮಿಸಿ ಸಾರ್ವಜನಿಕ ಸೇವೆಗೆ ಬಳಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಒಂದೊಮ್ಮೆ ಜಿಲ್ಲೆಯ ಆಡಳಿತದ ಹೆಮ್ಮೆಯ ಕೇಂದ್ರವಾಗಿದ್ದ ಈ ಕಟ್ಟಡ ಇಂದು ನಿರ್ಲಕ್ಷ್ಯದ ಸಂಕೇತವಾಗಿ ನಿಂತಿದೆ. ಸರ್ಕಾರದ ಅಮೂಲ್ಯ ಆಸ್ತಿಗೆ ಮರುಜೀವ ನೀಡಿ ಸಾರ್ವಜನಿಕರ ಉಪಯೋಗಕ್ಕೆ ತರಲು ಜಿಲ್ಲಾಡಳಿತ,ಸರ್ಕಾರ ಯಾವಾಗ ಕ್ರಮ ಕೈಗೊಳ್ಳಲಿದೆ ಎಂದು ಕಾದುನೋಡುವಂತಾಗಿದೆ.