ಉಡುಪಿ: ಕರಾವಳಿಯ ಪ್ರಸಿದ್ಧ ಯೂಟ್ಯೂಬರ್ ಸಚಿನ್ ಶೆಟ್ಟಿ ನೇತೃತ್ವದ Shutterbox Helping Hands ತಂಡವು ಕಳೆದ ಮೂರೂ ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷ ಧರಿಸುವ ಮೂಲಕ ಹಣ ಸಂಗ್ರಹಿಸಿ ಅಗತ್ಯವಿರುವವರಿಗೆ ನೆರವಾಗುತ್ತಿದೆ.

ಈ ಬಾರಿ ಕೂಡ ಕಾರ್ಕಳ ತಾಲ್ಲೂಕಿನ ಪಳ್ಳಿ ಗ್ರಾಮದ ಒಂದು ಬಡ ಕುಟುಂಬಕ್ಕೆ ಮನೆ ನಿರ್ಮಿಸುವ ಗುರಿಯೊಂದಿಗೆ ವೇಷಧರಿಸಿ ಹಣ ಸಂಗ್ರಹಿಸುವ ಕಾರ್ಯ ಮಾಡಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ ತಂಡದ ಸದಸ್ಯ ಸುದೀಪ್ ಶೆಟ್ಟಿ ಅವರು, ನಮ್ಮ ತಂಡವು 2023ರಲ್ಲಿ ಒಂದು ಪುಟ್ಟ ಬಾಲಕಿಯ ಚಿಕಿತ್ಸೆಗೆ 10.81ಲಕ್ಷಕ್ಕೂ ಹೆಚ್ಚು ಮೊತ್ತ ಸಂಗ್ರಹಿಸಿ ನೀಡಿದೆ.

ಕಳೆದ ವರ್ಷ ಬೈಲೂರಿನ ಹೊಸ ಬೆಳಕು ಆಶ್ರಮಕ್ಕೆ 15 ಲಕ್ಷಕ್ಕೂ ಅಧಿಕ ನೆರವು ನೀಡಿದೆ. ಈ ಬಾರಿ ಕೂಡ ಒಂದು ಹಾಲಿವುಡ್ ಚಿತ್ರದ ವಿಶೇಷ ವೇಷಧರಿಸುವ ಮೂಲಕ ಧನ ಸಂಗ್ರಹಿಸಿ ಪಳ್ಳಿ ಗ್ರಾಮದ ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ನೆರವಾಗಲಿದೆ ಎಂದರು.

ಪಳ್ಳಿ ಗ್ರಾಮದಲ್ಲಿ 90 ವರ್ಷದ ಕೊರಪಾಳ ಎಂಬ ವೃದ್ಧೆ, ಅವರ ಮಗ ಬಾಬು, ಸೊಸೆ ಹಾಗೂ ಆರನೇ ತರಗತಿಯಲ್ಲಿ ಓದುತ್ತಿರುವ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಅವರು ವಾಸಿಸುವ ಮನೆ ಸಂಪೂರ್ಣ ಶಿಥಿಲಗೊಂಡಿದೆ. ಬಾಬು ಅವರು ದೈವಕೋಲ ಸೇವೆಯ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಆದರೆ ಸ್ವಂತ ಮನೆ ನಿರ್ಮಿಸುವಷ್ಟು ಶಕ್ತಿ ಅವರಲ್ಲಿ ಇಲ್ಲ.

ಹೀಗಾಗಿ ಇದೇ ಸೆ.14ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ Shutterbox Helping Hands ತಂಡವು ವೇಷ ಧರಿಸಿ ಮನೆ ಮನೆಗೆ ತೆರಳಿ ಸಹಾಯಧನ ಸಂಗ್ರಹಿಸಿ ಈ ಬಡಕುಟುಂಬಕ್ಕೆ ನೀಡುವ ಮೂಲಕ ಆಸರೆಯಾಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ shutter box ಸಚಿನ್ ಶೆಟ್ಟಿ, ತಂಡದ ಸದಸ್ಯರಾದ ನಿತೇಶ್ ಪೂಜಾರಿ, ಚೇತನ್ ಕುಮಾರ್, ಅಭಿಷೇಕ್, ರೇಖಾನಾಥ್ ಇದ್ದರು.