ಉಡುಪಿ: ಕಾಶ್ಮೀರದಲ್ಲಿ ಧರ್ಮ ಕೇಳಿ ಗುಂಡು ಹೊಡೆದಿದ್ದಾರೆ. ಭಯೋತ್ಪಾದನೆ ಬಗ್ಗೆ ಗೊತ್ತಿದ್ದೂ ಸಿಎಂ ಯುದ್ಧ ಬೇಡ ಅಂತಾರೆ. ಮುಖ್ಯಮಂತ್ರಿಯಾಗಿ ಈ ಹೇಳಿಕೆ ದುರಾದೃಷ್ಟಕರ. ದೇಶಕ್ಕೆ ಗಂಡಾಂತರ ಬಂದಾಗ ಹೀಗೆಲ್ಲ ಮಾತನಾಡಬೇಡಿ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಹೇಳಿಕೆ ನೀಡಿದರು.

ಚುನಾವಣೆ, ಅಧಿಕಾರ ಬರುತ್ತೆ ಹೋಗುತ್ತೆ ನಿಮ್ಮ ವಯಸ್ಸಿನ ಬಗ್ಗೆ ಗೌರವ ಇದೆ. ಇಂದಿರಾಗಾಂಧಿ ಪ್ರಧಾನಿಯಾಗಿ ಯುದ್ಧಕ್ಕೆ ಹೋದಾಗ ಆರ್ ಎಸ್ ಎಸ್, ವಾಜಪೇಯಿ ಜನಸಂಘ ಎಲ್ಲರೂ ಬೆಂಬಲಿಸಿದ್ದರು. ರಾಜಕೀಯ ಬೇರೆ, ದೇಶ ಬೇರೆ ಇದನ್ನು ಮೊದಲು ಅರಿತುಕೊಳ್ಳಿ. ಮತ ಧರ್ಮದ ಕಾರಣಕ್ಕೆ ಭಾರತೀಯ ಹಿಂದೂಗಳನ್ನು ಹತ್ಯೆ ಮಾಡಿದ್ದನ್ನು ಸಮರ್ಥಿಸುವುದು ನಿಮ್ಮ ಹುದ್ದೆಗೆ ಗೌರವ ಅಲ್ಲ ಎಂದರು.

ತಮ್ಮ ಹೇಳಿಕೆಯಿಂದ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಬಹಳ ದೊಡ್ಡ ಮುಖಂಡರಾಗಿದ್ದಾರೆ. ಮುಖ್ಯಮಂತ್ರಿಗಳು ದೇಶಕ್ಕೆ ಶಕ್ತಿ ಕೊಡುವ ಕೆಲಸ ಮಾಡಲಿ. ಯುದ್ಧ ಬೇಡ ಅಂತೀರಿ, ಹೋದವರ ಜೀವ ಮತ್ತೆ ಬರುತ್ತಾ?, ಯುದ್ಧ ಬೇಡ ತಕ್ಕ ಪಾಠ ಕಲಿಸಿ ಅಂದ್ರೆ ಸಾಯುವವರು ಸಾಯಲಿ ಅಂತ ಅರ್ಥನಾ?. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ ಎಂಎಲ್ಎ ಮನೆಗೆ ಬೆಂಕಿ ಇಟ್ಟಾಗ ಭದ್ರತಾ ವೈಫಲ ಆಗಿರಲಿಲ್ಲವೇ?.

ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದಾಗ ಸಹಾನುಭೂತಿ ತೋರಿಸುತ್ತಿರಿ. ಅನಿವಾರ್ಯಾದರೆ ಯುದ್ಧ ಮಾಡಬೇಕು, ನೀವು ಬೆಂಬಲಿಸಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯಾಗಿ ನಿಮ್ಮ ಈ ಮಾತು ಶೋಭೆ ತರಲ್ಲ ಎಂದರು.

ಸಚಿವ ಸಂತೋಷ್ ಲಾಡ್ ನಿಂದ ಪ್ರಧಾನಿ ಮೋದಿ ಟೀಕೆ ವಿಚಾರವಾಗಿ ಮಾತನಾಡಿ, ಸಚಿವನಾದವ ತೂಕದ ಮಾತು ಆಡಬೇಕು. ಇಲ್ಲವಾದರೆ ನಗೆ ಪಾಟಲಿಗೀಡಾಗುತ್ತೀರಿ. ಗಂಭೀರವಾಗಿ ವರ್ತಿಸಬೇಕು ನಿಮ್ಮ ಮಾತಿಗೆ ಪ್ರತಿಕ್ರಿಯೆ ಕೊಡಬೇಕು ಎಂದು ನನಗೆ ಅನ್ನಿಸುತ್ತಿಲ್ಲ. ನರೇಂದ್ರ ಮೋದಿಯ ಬಗ್ಗೆ ಮಾತನಾಡುವಷ್ಟು ನೀವು ದೊಡ್ಡ ಮನುಷ್ಯ ಅಲ್ಲ. ಪಾಕಿಸ್ತಾನ ಸೇರಿದಂತೆ ಜಗತ್ತು ಮೋದಿಯ ನೋಡಿದರೆ ಅಚ್ಚರಿಗೊಳ್ಳುತ್ತದೆ ಎಂದರು.

ಆಡಳಿತ ದಕ್ಷತೆ ಪ್ರಾಮಾಣಿಕತೆ ನೋಡಿ ಜಗತ್ತು ಗೌರವ ಕೊಡುತ್ತದೆ. ನೀವಾಡೋ ಮಾತುಗಳು ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ. ಎಷ್ಟು ದಿನ ಅಂತ ಈ ಪಾಕಿಸ್ತಾನವನ್ನು ಸಹಿಸೋದು, ಎಷ್ಟು ದಿನ ಈ ಭಯೋತ್ಪಾದನೆಯನ್ನು ಸಹಿಸೋದು, ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು ದೇಶವಿದೇಶದ ಪ್ರವಾಸಿಗರು ಬರುತ್ತಿದ್ದರು. ಯುದ್ಧದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸದಿದ್ದರೆ ಭಯೋತ್ಪಾದಕರಿಗೆ ಶಕ್ತಿ ತುಂಬಿದಂತಾಗುತ್ತದೆ. ಯುದ್ಧ ಅನಿವಾರ್ಯವಾದರೆ ದೇಶ ಒಟ್ಟಾಗಬೇಕು ಎಂದರು.