ಉಡುಪಿ: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಉಡುಪಿ ತಾಲೂಕು ಸಮಿತಿ ಹಾಗೂ ಉಡುಪಿ ತಾಲೂಕು ಸಮಿತಿ ವ್ಯಾಪ್ತಿಯ ಬಂಟರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ದಿ. ಕೆ. ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಹಾಗೂ ಬಂಟರ ಸಮ್ಮಿಲ ಕಾರ್ಯಕ್ರಮವನ್ನು ಉಡುಪಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಇಂದು ಆಯೋಜಿಸಲಾಗಿತ್ತು.

ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು, ದಿ. ಸತೀಶ್ಚಂದ್ರ ಹೆಗ್ಡೆಯ ಬದುಕು ಒಂದು ದಂತಕತೆ. ಅವರ ವ್ಯಕ್ತಿತ್ವ, ಚಿಂತನೆ ಬಹಳ ಭಿನ್ನವಾಗಿತ್ತು.

18 ವರ್ಷಗಳ ಕಾಲ ಬಂಟರ ಸಂಘದ ಅಧ್ಯಕ್ಷರಾಗಿದ್ದ ಸತೀಶ್ಚಂದ್ರ ಹೆಗ್ಡೆ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟರ ಸಂಘವನ್ನು ಬಹಳ ಗಟ್ಟಿಯಾಗಿ ಅರ್ಥಪೂರ್ಣವಾಗಿ ಕಟ್ಟಿದ್ದಾರೆ.

ಬಂಟರ ಸಂಘಕ್ಕೆ ಶಕ್ತಿಯನ್ನು ತುಂಬಿದ ವ್ಯಕ್ತಿ. ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಬಡವರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಕಷ್ಟದಲ್ಲಿ ಇದ್ದವರಿಗೆ ಸಾಕಷ್ಟು ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಹೀಗಾಗಿ ಅವರನ್ನು ಸ್ಮರಿಸಿಕೊಳ್ಳುವ ಕೆಲಸ ಸದಾ ನಡೆಯಬೇಕು. ಅವರು ಬಿಟ್ಟು ಹೋಗಿರುವ ಆದರ್ಶ ಮೌಲ್ಯಗಳನ್ನು ನಾವು ಜೀವನದಲ್ಲಿ ಅವಳಡಿಸಿಕೊಳ್ಳಬೇಕು ಎಂದರು.

ಬದಲಾಗುತ್ತಿರುವ ಕಾಲಘಟದಲ್ಲಿ ಬಂಟರು ತಮ್ಮ ಮೂಲ ಪರಂಪರೆಯಾದ ಕೃಷಿ, ಆಚಾರ- ವಿಚಾರ ಮತ್ತು ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯವನ್ನು ಮಾಡಬೇಕು ಎಂದು ಕರೆ ನೀಡಿದರು.

ಉದ್ಯಮಿ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭಾಹಾರೈಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಸತೀಶ್ಚಂದ್ರ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ, ಬಂಟರ ಯಾನೆ ನಾಡವರ ಮಾತೃ ಸಂಘದ ನಿಕಟಪೂರ್ವ ಸಂಚಾಲಕ ಬಿ. ಜಯರಾಜ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯ ಕೃಷಿಕ ಎಚ್. ವಿಠಲ ಶೆಟ್ಟಿ ಶೇಡಿಕೊಡ್ಲು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು‌. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯೆ ಡಾ. ಶಿರಣ್ ಶೆಟ್ಟಿ, ಅಂತರಾಷ್ಟ್ರೀಯ ಮಾಜಿ ಕ್ರೀಡಾಪಟು ಶಾಲಿನಿ ಶೆಟ್ಟಿ, ವೈದ್ಯೆ ಡಾ. ಅಪೂರ್ವ ಜ್ಞಾನ ಬ್ರಹ್ಮಾವರ, ಕೃಷಿಕ ಸತೀಶ ಶೆಟ್ಟಿ ಶ್ಯಾನಾರಬೆಟ್ಟು ಅವರನ್ನು ಸನ್ಮಾನಿಸಲಾಯಿತು.