ಉಡುಪಿ: ಶಿಕ್ಷಕರು ಕೇವಲ ಪಾಠ ಪುಸ್ತಕವನ್ನು ಬೋಧಿಸುವವರಲ್ಲ ಬದಲಾಗಿ ವಿದ್ಯಾರ್ಥಿಗಳನ್ನು ಮನುಷ್ಯರನ್ನಾಗಿ ರೂಪಿಸುವವರಾಗಿದ್ದಾರೆ. ಶಿಕ್ಷಕರು ತಮ್ಮ ಅತೀವವಾದ ಬದ್ದತೆ, ನಿಷ್ಟೆ ಮತ್ತು ಪ್ರಾಮಾಣಿಕತೆಗೆ ಮಾದರಿಯಾಗಿದ್ದಾರೆ. ಶಿಕ್ಷಕರ ಕರ್ತವ್ಯ ನಿಷ್ಟೆಯ ಸೇವೆ ದೇಶವನ್ನು ಕಟ್ಟುವ ಮುಂದಿನ ನಾಯಕರನ್ನು ರೂಪಿಸುವ ಹಾಗೂ ಜ್ಞಾನಿ ವಿಜ್ಞಾನಿಗಳನ್ನು ಸೃಷ್ಟಿಸುವ ಸೇವೆಯನ್ನು ನೀಡುತ್ತಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಶನಿವಾರ ಸಂತೆಕಟ್ಟೆ ಸಮೀಪದ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದ ಅಮೂಲ್ಯ ಸಭಾಂಗಣದಲ್ಲಿ ಕಥೊಲಿಕ್ ಎಜುಕೇಶನಲ್ ಸೊಸೈಟಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಕಥೊಲಿಕ್ ವಿದ್ಯಾ ಸಂಸ್ಥೆಗಳು ಕೇವಲ ಬೌದ್ಧಿಕ ಕೌಶಲ್ಯವಲ್ಲದೆ ನೈತಿಕ ಮೌಲ್ಯಗಳು ಮತ್ತು ವಿಶ್ವಾಸದ ಬೆಳಕನ್ನು ಹರಡುವ ಪೀಠಗಳಾಗಬೇಕು ಇಂದಿನ ಯುಗದಲ್ಲಿ ಶಿಕ್ಷಕರು ಹಲವಾರು ಪಂಥಾಹ್ವಾನಗಳನ್ನು ಎದುರಿಸಬೇಕಾಗಿದ್ದು ಮಾಧ್ಯಮ ತಂತ್ರಜ್ಞಾನ ಕೃತಕಬುದ್ದಿಮತ್ತೆ, ಸಾಮಾಜಿಕ ಒತ್ತಡ ಮತ್ತು ಮೌಲ್ಯಗಳ ಕುಸಿತದ ನಡುವೆಯೂ ಧೈರ್ಯದಿಂದ ಮುಂದೆ ಸಾಗಬೇಕಾದ ಅವಶ್ಯಕತೆ ಇದೆ. ಶಿಕ್ಷಣ ಸಂಸ್ಥೆಗಳು ಜ್ಞಾನ ಮತ್ತು ಮೌಲ್ಯಗಳ ದೀಪಸ್ತಂಭಗಳಾಗುವುದರೊಂದಿಗೆ ಹೃದಯಗಳನ್ನು ರೂಪಿಸುವ ತಾಣಗಳಾಗಬೇಕು. ಕೇವಲ ಅಂಕಗಳನ್ನು ಪಡೆಯುವ ವ್ಯಕ್ತಿಗಳನ್ನಲ್ಲದೆ ಶೃದ್ಧೆ ಪ್ರೀತಿ ಮತ್ತು ಸೌಮ್ಯತೆಯ ಮಾದರಿಗಳನ್ನು ರೂಪಿಸುವಂತಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೋಕೆಶ್ ಸಿ ಮಾತನಾಡಿ ಜಿಲ್ಲೆಯ ಶಿಕ್ಷಣದ ಗುಣಮಟ್ಟ ಉನ್ನತ ಮಟ್ಟದಲ್ಲಿರಲು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದದು. ಶಿಕ್ಷಕರು ತೋರುವ ನಿಷ್ಠೆ ಹಾಗೂ ಪ್ರಯತ್ನದ ಫಲ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಇದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಕೂಡ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ರಾಜ್ಯ ಶಾಸ್ತ್ರ ಪ್ರಾಧ್ಯಾಪಕರಾದ ಡಾ|ದಯಾನಂದ ನಾಯ್ಕ್ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದಿದ ಶಿಕ್ಷಕ-ಶಿಕ್ಷಕೇತರ ಸಿಬಂಧಿಗಳನ್ನು, ಹತ್ತನೇ ಹಾಗೂ ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು, 100% ಫಲಿತಾಂಶ ಪಡೆದ ಶಿಕ್ಷಣ ಸಂಸ್ಥೆಗಳನ್ನು, ವಿಶೇಷ ಸಾಧನೆ ತೋರಿದ ವಿದ್ಯಾರ್ಥಿಗಳನ್ನು, ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಉಡುಪಿಯ ಶ್ರೇಯಾಂಸ್ ಗೋಮ್ಸ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ವಿನ್ಸೆಂಟ್ ಆಳ್ವಾ, ಡಾ. ಹೆರಾಲ್ಡ್ ಮೊನಿಸ್, ವಂ|ವಿಜಯ್ ಜೊಯ್ಸನ್ ಡಿಸೋಜಾ, ಸಿಸ್ಟರ್ ಪ್ರಮೀಳಾ ಶಾಂತಿ ಡಿಸೋಜಾ, ಎಲಿಝಾ ವಾಜ್, ವಂ|ಮೊತೇಶ್ ಮಥಾಯಸ್ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಕಥೊಲಿಕ ಎಜುಕೇಶನಲ್ ಸೊಸೈಟಿ ಕಾರ್ಯದರ್ಶೀ ವಂ|ವಿನ್ಸೆಂಟ್ ಕ್ರಾಸ್ತಾ ಸ್ವಾಗತಿಸಿ, ವಿಜಯ್ ಜೋಕಿಂ ಡಿಸೋಜಾ ವಂದಿಸಿದರು. ಸಿಸ್ಟರ್ ಅನಿತಾ ಡಿಸೋಜಾ, ಸವಿತಾ ಕುಮಾರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

