ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಅಚ್ಲಾಡಿಯ ಇ.ಸಿ.ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ವಿರುದ್ಧ ತಡೆಹಿಡಿದ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಅಂಕಪಟ್ಟಿಯನ್ನು ಹಿಂದಿರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಕೆಲವು ವರ್ಷಗಳಿಂದ ಅನಧಿಕೃತವಾಗಿ ಅನೇಕ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಅಂಕಪಟ್ಟಿಯನ್ನು ತಡೆಹಿಡಿದು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದ ಇ.ಸಿ.ಆರ್ ಕಾಲೇಜಿನ ಗೇಟಿನ ಎದುರು ಶೋಷಿತ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪ್ರಾಂಶುಪಾಲರು ಬಂದು ಸಮಸ್ಯೆಗಳನ್ನು ಆಲಿಸುವಂತೆ ಪಟ್ಟು ಹಿಡಿದರು.

ನಂತರ ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಗಣೇಶ್ ಪೂಜಾರಿ ಅವರು,ಯುಜಿಸಿ ನಿಯಮ ಬಾಹಿರವಾಗಿ ಅನಧಿಕೃತವಾಗಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ತಡೆಹಿಡಿದಿರುವುದನ್ನು ಈ ಕೂಡಲೇ ಹಿಂದಿರುಗಿಸುವಂತೆ ಮನವರಿಕೆ ಮಾಡಿ, ಅಲ್ಲಿ ಸೇರಿದ್ದ 10 ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಕಾಲೇಜಿನಿಂದ ಯಶಸ್ವಿಯಾಗಿ ಹಿಂಪಡೆಯಲಾಯಿತು.

