ಉಡುಪಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.21ರಿಂದ ಎ.4ರವರೆಗೆ ನಡೆಯಲಿದ್ದು, ಉಡುಪಿ ಜಿಲ್ಲೆ ಕಳೆದ ಬಾರಿ ಪಡೆದ ಅಗ್ರಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ನಡೆಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಹೊಸದಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಪರೀಕ್ಷೆ ಬರೆಯಲಿರುವ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಒಂದು ದಿನದ ಅಣುಕುಪರೀಕ್ಷೆಯನ್ನು ನಡೆಸಲಾಗಿದೆ. ಜಿಲ್ಲೆಯ ಎಲ್ಲಾ 51 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಈ ಅಣುಕು ಪರೀಕ್ಷೆಯಲ್ಲಿ ಕೈಬೆರಳೆಣಿಕೆ ವಿದ್ಯಾರ್ಥಿ ಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯದ ನಿವಾರಣೆ ಜೊತೆಗೆ ಅವರು ಪರೀಕ್ಷೆ ಬರೆಯಲಿರುವ ಹೊಸ ಪರಿಸರದ ಪರಿಚಯ, ಕೇಂದ್ರ ಹಾಗೂ ಕೊಠಡಿಗಳ ಮಾಹಿತಿಯನ್ನು ಮೊದಲೇ ಪಡೆದುಕೊಳ್ಳಲು ಇದು ಸಹಕಾರಿ ಯಾಗಿದೆ. ಹೀಗಾಗಿ ಪರೀಕ್ಷೆ ಆರಂಭಕ್ಕೆ ಮೊದಲಿನ ಅವರ ಮೇಲಿನ ಒತ್ತಡ ಕಡಿಮೆ ಯಾಗಲಿದೆ ಎಂದವರು ಅಭಿಪ್ರಾಯ ಪಟ್ಟರು.
ಪರೀಕ್ಷೆ ಪ್ರತಿದಿನ ಬೆಳಗ್ಗೆ 10:00ರಿಂದ ಅಪರಾಹ್ನ 1:00ಗಂಟೆಯವರೆಗೆ ನಡೆಯಲಿದೆ. ಪರೀಕ್ಷೆಯ ದಿನ ಗಳಂದು ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಬಂದು, ನೊಂದಣಿ ಸಂಖ್ಯೆ ಹಾಗೂ ಕೊಠಡಿ ಸಂಖ್ಯೆಯನ್ನು ಪರಿಶೀಲಿಸಬೇಕು. ಪರೀಕ್ಷಾ ಕೇಂದ್ರ ಗಳಿಗೆ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಸಾರ್ವಜನಿಕರು, ಪೋಷಕರು ಸೇರಿದಂತೆ ಯಾರಿಗೂ ಪ್ರವೇಶವಿರುವುದಿಲ್ಲ ಎಂದರು.
ಪರೀಕ್ಷಾ ಕೇಂದ್ರಕ್ಕೆ ಮೊಬೈಲ್/ಸೆಲ್ಯೂಲಾರ್ ಫೋನ್, ಟ್ಯಾಬ್ಲೆಟ್, ಪೆನ್ಡ್ರೈವ್, ಬ್ಲೂಟೂತ್ ಡಿವೈಸ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಮತ್ತು ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್ ಟೇಬಲ್ಸ್, ಕೈಚೀಲ, ಪರ್ಸ್, ನೋಟುಗಳು, ಚಾರ್ಜರ್, ಬಿಡಿ ಹಾಳೆಗಳು ಅಥವಾ ರೆಕಾರ್ಡಿಂಗ್ ವಸ್ತುಗಳು ಸೇರಿದಂತೆ ಇನ್ನಿತರೆ ಯಾವುದೇ ರೀತಿಯ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ಹಿಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತ ವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿದೆ. ಮೆಟಲ್ ವಾಟರ್ ಬಾಟಲ್ಸ್ ಅಥವಾ ನಾನ್ ಟ್ರಾನ್ಸ್ಪರೆಂಟ್ ವಾಟರ್ ಬಾಟಲ್ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ಸಹ ನಿಷೇಧಿಸಲಾಗಿದೆ ಎಂದರು. ಡಿಡಿಪಿಐ ಗಣಪತಿ ಕೆ. ಇದ್ದರು.

