ಉಡುಪಿ: ಸಮಾಜದ ಸ್ವಾಸ್ಥ್ಯ ಮತ್ತು ಲೋಕಕಲ್ಯಾಣದ ಉದ್ದೇಶದಿಂದ ಸನಾತನ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 29ರಂದು ಉಡುಪಿಯ ಎಂಜಿಎಂ ಮೈದಾನದಲ್ಲಿ ಶ್ರೀ ಮಹಾಧನ್ವಂತರಿ ಯಾಗ ಆಯೋಜಿಸಲಾಗಿದೆ.
ಯಾಗದ ಪೂರ್ವಭಾವಿಯಾಗಿ ನವೆಂಬರ್ 9ರಂದು ಸಂಜೆ 4 ಗಂಟೆಗೆ ಪೇಜಾವರ ಮಠದ ಹಿಂಭಾಗದಲ್ಲಿರುವ ಸಭಾಂಗಣದಲ್ಲಿ ಯಾಗದ ನೂತನ ಕಾರ್ಯಾಲಯವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ ಎಂದು ಯಾಗ ಸಮಿತಿಯ ಸಂಚಾಲಕ ಗುರುಪ್ರಸಾದ್ ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಆಶಯದೊಂದಿಗೆ ಯಾಗ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ 6 ಸಾವಿರಕ್ಕೂ ಅಧಿಕ ಮಂದಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ.
ಯಾಗದಲ್ಲಿ ಒಟ್ಟು 12 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ವಿಜಯ ಕೊಡವೂರು, ರಮಾನಂದ ಗೌಡ ಹಾಗೂ ಶ್ರೀನಿವಾಸ ಗಾಂವಸ್ಕರ್ ಉಪಸ್ಥಿತರಿದ್ದರು.

