ಉಡುಪಿ: ಕ್ರೀಡೆ ಎಂದರೆ ಕೇವಲ ಸ್ಪರ್ಧೆಯಲ್ಲ, ಅದು ವ್ಯಕ್ತಿತ್ವ, ಶಿಸ್ತು ಮತ್ತು ಐಕ್ಯತೆಯ ಪ್ರತಿಬಿಂಬವಾಗಿದ್ದು, ಸವಾಲುಗಳನ್ನು ಎದುರಿಸುವ ಧೈರ್ಯ ಹಾಗೂ ಜಯದಲ್ಲಿ ವಿನಯವನ್ನು ಕಲಿಸುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಶನಿವಾರ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾದ ಮಿಲಾಗ್ರಿಸ್ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಂದ್ಯಾಟವು ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳನ್ನು ಒಟ್ಟುಗೂಡಿಸುವ ಉತ್ತಮ ವೇದಿಕೆಯಾಗಿದೆ. ಇದು ಸಂಸ್ಥೆಯ ಒಗ್ಗಟ್ಟನ್ನು ಬಲಪಡಿಸುವುದರ ಜೊತೆಗೆ ಪರಸ್ಪರ ಸಹಕಾರ ಮತ್ತು ಗೌರವದ ಮೌಲ್ಯಗಳನ್ನು ಉತ್ತೇಜಿಸುತ್ತದೆ. ಶಿಕ್ಷಣವು ತರಗತಿಗಳಲ್ಲಿ ಮಾತ್ರ ಸೀಮಿತವಾಗದೆ ಸಂಬಂಧಗಳ ಮೂಲಕ ಮುಂದುವರಿಯುತ್ತದೆ ಎಂಬುದನ್ನು ಈ ಸಂಘ ತೋರಿಸಿದೆ. ಎಂದು ಹೇಳಿದರು.

ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದ ಅವರು, ಪ್ರಾಮಾಣಿಕತೆ, ಉತ್ಸಾಹ ಮತ್ತು ಗೌರವದೊಂದಿಗೆ ಆಟವಾಡುವಂತೆ ಕರೆ ನೀಡಿದ ಅವರು, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ ಮುಂದೆ ಸಾಗುವಂತೆ ಸಲಹೆ ನೀಡಿದರು.ವಿಜಯ ಮುಖ್ಯವಾದರೂ, ಅದಕ್ಕಿಂತ ಮುಖ್ಯವಾದುದು ಕ್ರೀಡಾಸ್ಫೂರ್ತಿ ಎಂಬುದನ್ನು ಒತ್ತಿ ಹೇಳಿದ ಅವರು, ಸೋಲಿನ ನಂತರ ಪುನಃ ಎದ್ದು ನಿಲ್ಲುವ ಮನೋಬಲವೇ ನಿಜವಾದ ಚಾಂಪಿಯನ್ಗಳ ಗುಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾಜಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ಮಂಜುಷಾ ಕನ್ವರ್ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾಲೇಜಿನ ಉಪಪ್ರಾಂಶುಪಾಲ ಸೊಫೀಯಾ ಡಾಯಸ್, ಶಾಲೆಟ್ ಮಥಾಯಸ್, ಹಳೆ ವಿದ್ಯಾರ್ಥಿ ಸಂಘದ ಆಲನ್ ಲೂವಿಸ್, ತೋಮಸ್ ಡಿಸೋಜಾ, ರಾಜ್ ಬೆಂಗ್ರೆ, ಮೆಲ್ವಿನ್ ಸಿಕ್ವೇರಾ, ವಿಲ್ಸನ್ ಫೆರ್ನಾಡಿಸ್, ನಿಖಿಲ್ ಹಾಗೂ ಇತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ|ವಿನ್ಸೆಂಟ್ ಆಳ್ವಾ ಸ್ವಾಗತಿಸಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಶಿಧರ ಸಾಲಿಯಾನ್ ವಂದಿಸಿದರು.

View this post on Instagram

A post shared by News Karnataka (@newskarnataka)