ಉಡುಪಿ: ಯುವಕನೋರ್ವ ತನ್ನ ಬೈಕ್ ಡೂಮ್ನಲ್ಲಿ ಹಾವನ್ನು ಕಂಡು ಬೆಚ್ಚಿ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲದ ರಾಹುಲ್ ಎಂಬಾತ ಬೆಳಿಗ್ಗೆ ಕಿನ್ನಿಮೂಲ್ಕಿ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಡ್ರೈವಿಂಗ್ ಕೆಲಸಕ್ಕೆ ಹೋಗಿದ್ದರು. ರಾತ್ರಿ 8.30ಕ್ಕೆ ಕೆಲಸದಿಂದ ವಾಪಸ್ಸಾಗಿ ಬೈಕ್ ನೊಂದಿಗೆ ಉಡುಪಿ ಬಿಗ್ ಬಜಾರ್ ಬಳಿ ಬಂದಿದ್ದಾರೆ.
ಆಗ ಬೈಕ್ ಡೂಮ್ ಅಲ್ಲಿ ಮಲಗಿದ್ದ ಹಾವು ಕಣ್ಣಿಗೆ ಬಿದ್ದಿದ್ದು ಕೂಡಲೇ ಬೈಕ್ ನಿಲ್ಲಿಸಿ ಅವಘಡದಿಂದ ಪಾರಾದರು. ಬಳಿಕ ಅರಣ್ಯ ಇಲಾಖೆಯ ಮೂಲಕ ಪ್ರಾಣೇಶ್ ಪರ್ಕಳ ಅವರಿಗೆ ಕರೆ ಮಾಡಿ ಹಾವು ಇರುವ ಬಗ್ಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಉರಗ ಪರಿಣಿತರು ಬಂದು ನೋಡಿದಾಗ ಅದು ವಿಷ ರಹಿತ ಹೆಬ್ಬಾವಿನ ಮರಿ ಆಗಿದ್ದು, ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

