ಉಡುಪಿ: ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಪರ್ಯಾಯೋತ್ಸವದ ಪ್ರಯುಕ್ತ ನಗರಸಭೆ ವತಿಯಿಂದ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಗರದಾದ್ಯಂತ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಇಂದು (ಜ.15) ಸಂಜೆ 7 ಗಂಟೆಗೆ ಕೋರ್ಟ್‌ ರಸ್ತೆಯ ಕೆನರಾ ಬ್ಯಾಂಕ್ ಸಮೀಪದ ವೃತ್ತದಲ್ಲಿ ಇದರ ಉದ್ಘಾಟನೆ ನಡೆಯಲಿದೆ.

ಮುಂದಿನ 5 ದಿನಗಳ ಕಾಲ ವಿದ್ಯುದ್ದೀಪಾಲಂಕಾರ ಇರಲಿದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದರು.

ಉಡುಪಿ ಶೀರೂರು‌ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದರು. ಕೀರ್ತಿಶೇಷ ಶೀ ಲಕ್ಷ್ಮೀವರತೀರ್ಥ ಶ್ರೀಪಾದರು ಈ ಹಿಂದೆ ಪ್ರಸ್ತಾಪಿಸಿದಂತೆ ಉತ್ತರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್‌ನಲ್ಲಿ ಪರಶುರಾಮ ಸ್ವಾಗತ ಗೋಪುರ ನಿರ್ಮಾಣಕ್ಕೆ ಜ.16ರಂದು ಬೆಳಿಗ್ಗೆ 9ಗಂಟೆಗೆ ಶಿಲಾನ್ಯಾಸ ನೆರವೇರಿಸಲಾಗುವುದು. ಸುಮಾರು ಒಂದು ಕೋಟಿ ರೂ.ವೆಚ್ಚದ ಈ ಭವ್ಯ ಸ್ವಾಗತ ಗೋಪುರವನ್ನು ಅಂಬಾಗಿಲು ಜಂಕ್ಷನ್ ಬಳಿ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ನಿರ್ಮಿಸಲಾಗುತ್ತದೆ.

ಅಂದು ಬೆಳಗ್ಗೆ 9ಕ್ಕೆ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಅಂಬಾಗಿಲಿನಲ್ಲಿ ಪರಶುರಾಮದ್ವಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಮುಂದಿನ ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದರು.

ಅನ್ನಸಂತರ್ಪಣೆ: ಪರ್ಯಾಯ ಮುನ್ನಾದಿನ ಜ.17ರ ಶನಿವಾರ ಉಡುಪಿಯ ವಿವಿಧ ಭಾಗಗಳಲ್ಲಿ ಅಂದರೆ ರಾಜಾಂಗಣದ ಪಾರ್ಕಿಂಗ್ ಪ್ರದೇಶ, ನಿತ್ಯಾನಂದ ಮಂದಿರ, ಬಸ್ಸುನಿಲ್ದಾಣ ಸಮೀಪದ ಬೋರ್ಡ್ ಶಾಲೆ – ಮೂರೂ ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಅನ್ನಸಂತರ್ಪಣೆ ನಡೆಯಲಿದೆ.

ಸುಮಾರು ಒಂದು ಲಕ್ಷದಷ್ಟು ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜನವರಿ 17ರಿಂದ 22ರವರೆಗೆ ಪ್ರತಿದಿನ ವಿಶೇಷ ಅನ್ನಸಂತರ್ಪಣೆ ನಡೆಯಲಿದ್ದು ನಾಲ್ಕರಿಂದ ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕರು ತಿಳಿಸಿದರು.

ಪರ್ಯಾಯ ಶೋಭಾಯಾತ್ರೆ: ಈ ಬಾರಿಯ ಪರ್ಯಾಯ ಶನಿವಾರ ಮತ್ತು ಭಾನುವಾರ ಬಂದಿರುವುದರಿಂದ ಸುಮಾರು ಎರಡರಿಂದ ಮೂರು ಲಕ್ಷ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪರ್ಯಾಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿಶಿಷ್ಟವಾಗಿ ನಡೆಯಲಿದೆ ಎಂದವರು ತಿಳಿಸಿದರು. ಇದರಲ್ಲಿ ದೇಶಾದ್ಯಂತದಿಂದ ಬಂದ ಸಾಂಸ್ಕೃತಿಕ ತಂಡಗಳೊಂದಿಗೆ ಸ್ಥಳೀಯ ಕಲಾತಂಡಗಳು, ಭಜನಾ ತಂಡಗಳು, ತಾಲೀಮು ತಂಡಗಳು ಶೋಭಾ ಯಾತ್ರೆಯಲ್ಲಿ ಭಾಗವಹಿಸಲಿವೆ.

ಶೋಭಾ ಯಾತ್ರೆ ಜ.18ರ ಭಾನುವಾರ ಮುಂಜಾನೆ ಎರಡು ಗಂಟೆಗೆ ಆರಂಭವಾಗಲಿದ್ದು ಸುಮಾರು ಎರಡು ಗಂಟೆಗಳ ಕಾಲ ನಡೆಯಲಿದೆ. ಬಳಿಕ ಅಲಂಕೃತ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಮುಂಜಾನೆ 5:30ರಿಂದ ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ.

ಇದರಲ್ಲಿ ಪರ್ಯಾಯ ದೀಕ್ಷೆ ತೆಗೆದುಕೊಂಡಿರುವ ಶ್ರೀವೇದವರ್ಧನ ತೀರ್ಥರು ಇತರ ಸ್ವಾಮೀಜಿಯವರೊಂದಿಗೆ, ನಾಡಿನ ಗಣ್ಯರು, ಉದ್ಯಮಿಗಳನ್ನು ಶ್ರೀಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಪರ್ಯಾಯ ದರ್ಬಾರ್‌ನಲ್ಲಿ ಕೇಂದ್ರ ಮತ್ತು ರಾಜ್ಯದ ಸಚಿವರು, ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್, ಮಧುಕರ ಮುದ್ರಾಡಿ, ಸಂತೋಷ್ ಸುವರ್ಣ ಬೆಳ್ಳೆ ಉಪಸ್ಥಿತರಿದ್ದರು.