ಉಡುಪಿ: ಚೈತ್ರ ಕುಂದಾಪುರ ವಿರುದ್ಧ ಉಡುಪಿ ಉಪವಿಭಾಗಾಧಿಕಾರಿ ಕೋರ್ಟ್ ಆದೇಶ ಹೊರಡಿಸಿದೆ. ಚೈತ್ರ ತಂದೆ ಬಾಲಕೃಷ್ಣ ನಾಯಕ್ ಚೈತ್ರ ಕುಂದಾಪುರ ಮತ್ತು ಪತ್ನಿಯಿಂದ ತನಗೆ ಕಿರುಕುಳ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಚೈತ್ರಾ ಕುಂದಾಪುರ ತಂದೆ, ಬಾಲಕೃಷ್ಣ ನಾಯ್ಕ್ ಪರ ಹಿರಿಯ ನಾಗರಿಕರ ನ್ಯಾಯಾಲಯ ತೀರ್ಪು ನೀಡಿದೆ. ಬಾಲಕೃಷ್ಣ ನಾಯ್ಕ್ ಗೆ ಯಾವುದೇ ದೈಹಿಕ ಮಾನಸಿಕ ಕಿರುಕುಳ ನೀಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅನುವು ಮಾಡಿಕೊಡಬೇಕು. ಪ್ರತಿವಾದಿಯಿಂದ ಸೂಕ್ತ ಮುಚ್ಚಳಿಕೆ ಪಡೆಯುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ನಿಯಮಗಳು ಅಡಿಯಲ್ಲಿ ರಕ್ಷಣೆ ನೀಡಲಾಗಿದೆ. ನಿಯಮಾನುಸಾರ ಕ್ರಮ ಕೈಗೊಳ್ಳಲು ಕುಂದಾಪುರ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ.
ಚೈತ್ರ ಮತ್ತು ತಂದೆಯ ನಡುವೆ ಸಂಘರ್ಷ ತಾರಕಕೇರಿತ್ತು. ಚೈತ್ರ ಕುಂದಾಪುರ ಮದುವೆ ವೇಳೆ ತಂದೆ ಬಾಲಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ತಂದೆಯ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಪರೋಕ್ಷವಾಗಿ ಚೈತ್ರಾ ಕಿಡಿಕಾರಿದ್ದರು.
ತಂದೆಯ ಆಸರೆ ಇಲ್ಲದೆ ನಾನು ಬೆಳೆದಿದ್ದೇನೆ. ತಾಯಿ ನಮ್ಮನ್ನು ಕಷ್ಟಪಟ್ಟು ಸಾಕಿದ್ದಾರೆ. ತಂದೆಯ ಬೇಜವಾಬ್ದಾರಿ ಕುರಿತು ಚೈತ್ರಾ ಕಿಡಿಗಾರಿದ್ದರು. ಆದರೆ ಪತ್ನಿ ಮತ್ತೆ ಮಗಳು ನನ್ನನ್ನು ಮನೆಗೆ ಸೇರಿಸುತ್ತಿಲ್ಲ ಎಂದು ಬಾಲಕೃಷ್ಣ ನಾಯ್ಕ್ ಆರೋಪಿಸಿದ್ದರು.
ನನಗೆ ಸರಿಯಾಗಿ ಊಟ ಉಪಹಾರ ನೀಡುತ್ತಿಲ್ಲ. ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದಾರೆ. ಚೈತ್ರ ನಡೆಸಿರುವ ಅವ್ಯವಹಾರಗಳನ್ನು ನಾನು ಆಕ್ಷೇಪಿಸಿದ್ದೇನೆ. ತಾಯಿ, ಮಗಳು ಸೇರಿ ನನಗೆ ಕಿರುಕುಳ ನೀಡಿದ್ದಾರೆ ಎಂದು ತಂದೆ ಬಾಲಕೃಷ್ಣ ನಾಯ್ಕ್ ಆರೋಪಿಸಿದ್ದರು. ಮನೆಯಿಂದ ಹೊರ ಬಂದು ಹಿರಿಯ ಮಗಳ ಮನೆಯಲ್ಲಿ ಬಾಲಕೃಷ್ಣ ನಾಯ್ಕ್ ವಾಸವಿದ್ದರು.
ಪತ್ನಿ, ಪುತ್ರಿ ಚೈತ್ರಾ ಹಾಗೂ ಕೊನೆಯ ಮಗಳಿಂದ ಕಿರುಕುಳ ಎಂದು ಬಾಲಕೃಷ್ಣ ಆರೋಪಿಸುತ್ತಾ ಬಂದಿದ್ದರು. ತನ್ನ ಪಿತ್ರಾರ್ಜಿತ ಆಸ್ತಿ ಗಾಗಿ ಕಿರುಕುಳ ಎಂದು ಆರೋಪ ಮಾಡಿದ್ದಾರೆ. ಮಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಪೋಷಣೆ ಮಾಡಿದ್ದೇನೆ. ಮನೆಯಲ್ಲಿ ನಡೆಯುವ ಅಕ್ರಮ ವ್ಯವಹಾರಕ್ಕೆ ವಿರೋಧ ವ್ಯಕ್ತಪಡಿಸಿದ್ದೇನೆ. ನನ್ನ ಸ್ವಂತ ಮನೆಯಲ್ಲಿ ನಾನು ಹೊರಗಿನವನಾಗಿದ್ದೇನೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಸದ್ದು ಮಾಡುತ್ತಿದ್ದು, ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲೂ ತಾನು ಸಿಂಗಲ್ ಪೇರೆಂಟ್ ಆಗಿ ಬೆಳೆದಿದ್ದೇನೆ ಎಂದು ಚೈತ್ರಾ ಹೇಳಿಕೊಳ್ಳುತ್ತಾರೆ. ಗೋವಿಂದ ಬಾಬು ಪೂಜಾರಿ ಎಂಬವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪವನ್ನು ಚೈತ್ರ ಕುಂದಾಪುರ ಎದುರಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆಯಾಗಿ ಚೈತ್ರಾ ಸುಖೀ ಸಂಸಾರ ನಡೆಸುತ್ತಿದ್ದಾರೆ. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಚೈತ್ರ ಗದ್ದಲ ಎಬ್ಬಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಹಿರಿಯ ನಾಗರಿಕರ ನ್ಯಾಯಾಲಯದ ತೀರ್ಪು ಬಂದಿದೆ.

