ಉಡುಪಿ: ಸಹಜಯೋಗ ಪರಿವಾರದ ವತಿಯಿಂದ ಕಾಪು ಪುರಸಭೆ, ಬನ್ನಂಜೆಯ ನಾರಾಯಣಗುರು ಹಾಗೂ ಉಡುಪಿ ಕೃಷ್ಣಮಠ ರಾಜಾಂಗಣದಲ್ಲಿ ಆತ್ಮಸಾಕ್ಷಾತ್ಕಾರ ಮತ್ತು ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.
ಕೃಷ್ಣಮಠ ರಾಜಾಂಗಣದಲ್ಲಿ ಆಯೋಜಿಸಿದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪುತ್ತಿಗೆ ಮಠದ ಪ್ರತಿನಿಧಿ ರಮೇಶ್ ಭಟ್ ಅವರು, ಯೋಗ ಎನ್ನುವುದು ಮನಸ್ಸಿಗೆ ಸಂಬಂಧಪಟ್ಟ ವಿಚಾರ. ದೈಹಿಕವಾಗಿ ನಾವು ಯಾವುದೇ ಆಸನಗಳನ್ನು ಮಾಡಿಕೊಳ್ಳಬಹುದು. ಆದರೆ ಮೌನದಲ್ಲಿ ಯೋಗ ಮಾಡಬೇಕು. ಮೌನದಲ್ಲಿ ಯೋಗ ಮಾಡುತ್ತಾ ಮಾಡುತ್ತಾ ಧ್ಯಾನಕ್ಕೆ ಇಳಿಯಬೇಕು. ಆಗ ನಮಗೆ ಆತ್ಮಸಾಕ್ಷಾತ್ಕಾರದ ಅರಿವಾಗುತ್ತದೆ. ಆತ್ಮಸಾಕ್ಷಾತ್ಕಾರದ ಅರಿವಾದಾಗ ನಮ್ಮ ಹೃದಯದೊಳಗಿನ ಭಗವಂತ ನಮಗೆ ಕಾಣ ಸಿಗುತ್ತಾನೆ ಎಂದರು.
ನಮ್ಮ ದೇಹದೊಳಗೆ ಭಗವಂತ ಇದ್ದಾನೆ. ನಾವು ಮೌನ ಯೋಗದ ಮೂಲಕ ಆತ್ಮಸಾಕ್ಷಾತ್ಕಾರ ಮಾಡಿದಾಗ ಭಗವಂತ ನಮಗೆ ಕಾಣಸಿಗುವನು. ಸುಖ ಶಾಂತಿ ನೆಮ್ಮದಿ ಲಭಿಸಬೇಕಾದರೆ ಮೌನ ಯೋಗ ಅಗತ್ಯ. ಶ್ರೀಕೃಷ್ಣನನ್ನು ನೋಡಬೇಕಾದರೆ ಆತನ ಪ್ರತಿಮೆಯ ಹತ್ತಿರ ಹೋಗಬೇಕು. ಅಲ್ಲಿ ಧ್ಯಾನ ಮಾಡಿದಾಗ ನಮ್ಮ ಆತ್ಮದೊಳಗಿನ ಪರಮಾತ್ಮನು ಆ ಪ್ರತಿಭೆ ಒಳಗೆ ಹೋಗುತ್ತಾನೆ. ಆಗ ನಮ್ಮ ದೇಹದೊಳಗಿನ ಭಗವಂತನನ್ನು ಕಾಣಬಹುದು ಎಂದು ಹೇಳಿದರು.
ಸಹಜಯೋಗ ಪರಿವಾರದ ಪದ್ಮಾ ಗಂಗಾಧರ್, ಉಡುಪಿ ಸೆಂಟರ್ ಅಧ್ಯಕ್ಷ ವಿಷ್ಣುಮೂರ್ತಿ ಉಡುಪ, ಕಾರ್ಯಕರ್ತರಾದ ನವೀನ್ ಶೆಟ್ಟಿ, ಗೋವರ್ಧನ ತಿಂಗಳಾಯ, ಅಭಿಷೇಕ್ ಇದ್ದರು.

