ಉಡುಪಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ.ಕ ಮತ್ತು ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಉಡುಪಿ ತಾಲೂಕು ಘಟಕದ ಸಹಕಾರದೊಂದಿಗೆ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಡುಪಿ ತುಳುಕೂಟ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಅವರಿಗೆ ಸಂಗೊಳ್ಳಿ ರಾಯಣ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು.‌ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಯಕರ್ ಶೆಟ್ಟಿ ಇಂದ್ರಾಳಿ ಅವರು, ನಾನು ಈವರೆಗೆ ಯಾವುದೇ ಅರ್ಜಿ ಹಾಕಿ ಪ್ರಶಸ್ತಿ, ಪುರಸ್ಕಾರ ಪಡೆದಿಲ್ಲ. ಈ ಪ್ರಶಸ್ತಿಯಿಂದ ನನ್ನ ಸಮಾಜಮುಖಿ‌ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು.

ಸಂಗೊಳ್ಳಿ ರಾಯಣ್ಣ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಹೆಸರು, ಹೆಜ್ಜೆ ಗುರುತು ಶಾಶ್ವತವಾಗಿದೆ. ಕರ್ನಾಟಕ ರಾಜ್ಯ ಮಾತ್ರವಲ್ಲ ಇತರ ರಾಜ್ಯಗಳಲ್ಲಿ ನೆನಪಿಸಿಕೊಳ್ಳುವ ಏಕೈಕ ನಾಯಕ ಸಂಗೊಳ್ಳಿ ರಾಯಣ್ಣ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸಂಗೊಳ್ಳಿ ರಾಯಣ್ಣ‌ ಇಡೀ‌ ದೇಶಕ್ಕೆ ಮಹಾನ್ ನಾಯಕ ಎಂದು ಬಣ್ಣಿಸಿದರು.ಈ‌ ನೆಲ, ಸಂಸ್ಕೃತಿಯ ಬಗ್ಗೆ ಅಪ್ರತಿಮ ಪ್ರೇಮವನ್ನು ಹೊಂದಿರಬೇಕು. ಉಡುಪಿಯ ಅಭಿವೃದ್ಧಿಯಲ್ಲಿ ಹೊರ ಜಿಲ್ಲೆಯ ಕಾರ್ಮಿಕರ ಪಾತ್ರ ಮಹತ್ತರವಾಗಿದೆ. ನಮ್ಮ ಹಕ್ಕಿನ ಜತೆಗೆ ಕರ್ತವ್ಯ‌ದ ಬಗ್ಗೆಯೂ ಚಿಂತಿಸಬೇಕು. ಸಂಗೊಳ್ಳಿ ರಾಯಣ್ಣ ಸಂಘಟನೆಗಳ ಮೂಲಕ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.

ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್ . ಪಿ. ಆಶಯ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ‌ಪೂರ್ಣಿಮಾ ಮಾತನಾಡಿದರು.ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ವಿಶ್ವನಾಥ್ ಶೆಣೈ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸ್ಥಾಪಕಾಧ್ಯಕ್ಷ ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ, ನಗರಸಭಾ ಸದಸ್ಯ ವಿಜಯ ಕೊಡವೂರು, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಭಾಕರ್ ಪೂಜಾರಿ ಹಾಗೂ ಶ್ವೇತಾ ಜಯಕರ್ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿ, ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.