ಉಡುಪಿ: ಬೆಳೆಯುತ್ತಿರುವ ನಗರ ಪ್ರದೇಶದಲ್ಲಿ ಸದ್ಯ ಅತಿ ದೊಡ್ಡದಾಗಿ ಕಾಣುತ್ತಿರುವ ಸಮಸ್ಯೆ ಎಂದರೆ ಅದು ತ್ಯಾಜ್ಯ ವಿಲೇವಾರಿ ಸಮಸ್ಯೆ. ಸದ್ಯ ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದ್ಯ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಮತ್ತೆ ಎರಡನೇ ಬಾರಿ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಉಳ್ತೂರು ಗ್ರಾಮದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಿರ್ಮಿಸಲು ಉದ್ದೇಶಿಸಿರುವ ಎಫ್ ಎಸ್ ಟಿಪಿ ಘಟಕ ವಿಚಾರವಾಗಿ ಸಮಾಲೋಚನೆ ಸಭೆ ನಡೆಸಿತ್ತು. ಈ ವೇಳೆ ಯೋಜನೆ ವಿರೋಧಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದ್ಯ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಎರಡನೇ ಬಾರಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಈಗಾಗಲೇ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿಯಲ್ಲಿ ನಿರ್ಮಿಸಿರುವ ಗಣತ್ಯಾಜ್ಯ ವಿಲೇವಾರಿ ಘಟಕ ಸಾರ್ವಜನಿಕರ ವಿರೋಧರ ನಡುವೆ ತಲೆಯೆತ್ತಿದೆ. ಇನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಲ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಕಾವಡಿ ಎಂಬಲ್ಲಿ ಪಟ್ಟಣ ಪಂಚಾಯತ್ ಜಾಗ ನಿಗದಿ ಪಡಿಸಿತು.

ಆದರೆ ಅಲ್ಲಿ ಜನರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹಿಂದೆ ಪಕ್ಕದ ಕುಂದಾಪುರ ತಾಲೂಕು ವ್ಯಾಪ್ತಿಯ ಉಳ್ತೂರು ಗ್ರಾಮದಲ್ಲಿ ಖರೀದಿಸಿ ಕಾಯ್ದಿರಿಸಲಾಗಿರುವ ಜಾಗದಲ್ಲಿ ಮಲ ತ್ಯಾಜ್ಯ ಸಂಸ್ಕರಣ ಘಟಕ ಪ್ರಾರಂಭಿಸುವ ಯೋಜನೆ ರೂಪಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜನರೊಂದಿಗೆ ಸಮಲೋಚನೆ ಸಭೆ ನಡೆಸಿದರು. ಈ ವೇಳೆ ಮಲ ತ್ಯಾಜ್ಯ ಸಂಸ್ಕರಣ ಘಟಕದ ವಿರುದ್ಧ ಜನಾಕ್ರೋಶ ವ್ಯಕ್ತವಾಯಿತು.

ಸಭೆಯಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಗಳು ಜನರಿಗೆ ಮಾಹಿತಿ ನೀಡುವ ವೇಳೆ ಆಕ್ರೋಶ ವ್ಯಕ್ತವಾಯಿತು. ಪಕ್ಕದ ಬ್ರಹ್ಮಹಾರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲವನ್ನು ತಂದು ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿ ಸುರಿಯುವುದು ಸರಿಯೇ ನೀವೇ ಆಲೋಚಿಸಿ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದರು.

ಇನ್ನು ಜನ ವಸತಿ ಪ್ರದೇಶದ ಮಧ್ಯದಲ್ಲಿ ಮಲ ತ್ಯಾಜ್ಯ ಸಂಸ್ಕರಣೆ ನಡೆಸಿದರೆ ಸುತ್ತಲಿನ ಪರಿಸರಕ್ಕೆ ಸಮಸ್ಯೆಯಾಗುತ್ತದೆ ಜನರು ವಾಸಿಸಲು ಅನಾನುಕೂಲವಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಉಳ್ತೂರು ಗ್ರಾಮದ ಜಾಗದ ವಿಚಾರದಲ್ಲಿ ಗೋಲ್ಮಾಲ್ ನಡೆದಿದೆ ಸ್ಥಳೀಯ ಗ್ರಾಮ ಪಂಚಾಯಿತಿಯ ಯಾವುದೇ ಅನುಮೋದನೆಯನ್ನ ಪಡೆಯದೆ ಪಕ್ಕದ ಪಟ್ಟಣ ಪಂಚಾಯಿತಿ ಇಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುವುದು ಸರಿಯಲ್ಲ ಎಂದು ಜನರು ಆಕ್ರೋಶ ಹೊರಹಾಕಿದರು.

ಒಟ್ಟಾರೆಯಾಗಿ ಸಮಾಲೋಚನಾ ಸಭೆಯಲ್ಲಿ ಉಳ್ತೂರು ಗ್ರಾಮದಲ್ಲಿ ಯಾವ ಕಾರಣಕ್ಕೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಲ ತ್ಯಾಜ್ಯ ಸಂಸ್ಕರಣ ಘಟಕ ಮಾಡಕೂಡದು ಎಂದು ಗ್ರಾಮಸ್ಥರು ತಾಕಿದ್ದು ಮಾಡಿದರು. ಇದಕ್ಕೂ ಮೀರಿ ಬಲವಂತವಾಗಿ ಇಲ್ಲಿ ಘಟಕ ಸ್ಥಾಪನೆಗೆ ಮುಂದಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಈ ಸಂದರ್ಭ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.