ಉಡುಪಿ: ಆರ್ಎಸ್ಎಸ್ನ ಹಿರಿಯ ಕಾರ್ಯಕರ್ತ ಹಾಗೂ ಕಟ್ಟಾಳು ಕೇಶವರಾಯ ಪ್ರಭು ಅವರು ಮಣಿಪಾಲದ ಹುಡ್ಕೋ ಕಾಲೋನಿಯ ಸ್ವಗೃಹದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿಗೆ ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಕೇಶವರಾಯ ಪ್ರಭು ಅವರು ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ವೃತ್ತಿಯಲ್ಲಿದ್ದರೂ ದಿನದ ಬಹುಪಾಲು ಸಮಯವನ್ನು ಸಂಘದ ಸೇವಾ ಕಾರ್ಯಕ್ಕೆ ಮೀಸಲಿಟ್ಟಿದ್ದರು. ಅನಾರೋಗ್ಯದ ನಡುವೆಯೂ ಸಂಘದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎಂದು ಶೋಭಾ ಕರಂದ್ಲಾಜೆ ಸ್ಮರಿಸಿದರು.
ತಮ್ಮ ಆರಂಭಿಕ ದಿನಗಳಲ್ಲಿ ಕೇಶವರಾಯ ಪ್ರಭು ಅವರ ಮನೆಯಲ್ಲಿ ಆಶ್ರಯ ಪಡೆದಿದ್ದ ಸಂದರ್ಭವನ್ನು ನೆನಪಿಸಿಕೊಂಡ ಶೋಭಾ ಕರಂದ್ಲಾಜೆ, “ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿರುವ ಅವರ ಮನೆ ಅತ್ಯಂತ ಚಿಕ್ಕದಾಗಿತ್ತು. ಆದರೆ ಆ ಮನೆ ಹಲವಾರು ಜನರಿಗೆ ಆಶ್ರಯ ನೀಡಿದ ಮನೆ. 2014ರಲ್ಲಿ ನಾನು ಅಭ್ಯರ್ಥಿಯಾಗಿ ಮಣಿಪಾಲಕ್ಕೆ ಬಂದಾಗ ಈ ಮನೆಯೇ ನನಗೆ ಆಶ್ರಯ ನೀಡಿತ್ತು. ಸುಮಾರು ಮೂರು ತಿಂಗಳು ಇಲ್ಲಿಯೇ ಇದ್ದು ಊಟ ಮಾಡಿ, ಮಾಮ ಮತ್ತು ಅಮ್ಮನ ಪ್ರೀತಿಯನ್ನು ಪಡೆದಿದ್ದೆ,” ಎಂದರು.
“ಇಂದು ಅವರಿಬ್ಬರೂ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಬದುಕಿದ್ದಾಗಲೇ ನಮಗೆ ನೀಡಿದ ಪ್ರೀತಿ, ಪ್ರೇರಣೆ ಹಾಗೂ ಆದರ್ಶಗಳು ಸದಾ ದಾರಿದೀಪವಾಗಿರುತ್ತವೆ. ತಮ್ಮ ಮನೆಯನ್ನು ಕೂಡ ಸಂಘದ ಕಾರ್ಯಕ್ಕಾಗಿ ನೀಡಿದ್ದಾರೆ,” ಎಂದು ಹೇಳಿದರು.
ತಮಗೆ ಇಬ್ಬರು ಮಕ್ಕಳಿದ್ದರೂ, ಅವರೂ ಸಂಘದ ಸೇವಾ ಕಾರ್ಯಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಮ್ಮ ಮನೆಯನ್ನು ಸೇವಾ ಕಾರ್ಯಗಳಿಗೆ ಬಳಸುವಂತೆ ಕೇಶವರಾಯ ಪ್ರಭು ಅವರು ಅನಾರೋಗ್ಯದ ಸಂದರ್ಭದಲ್ಲಿ ಸಂಘದ ಪ್ರಮುಖರನ್ನು ಕರೆಸಿ ಬರೆದುಕೊಟ್ಟಿದ್ದರು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
“ಇದು ರಾಷ್ಟ್ರೀಯ ಸ್ವಯಂಸೇವಕ ಸಂಘ ನಮಗೆ ಕಲಿಸುವ ಪಾಠ. ಇಂದು ಆರ್ಎಸ್ಎಸ್ ಎಂದರೇನು ಎಂದು ಚರ್ಚೆ ಮಾಡುವಾಗ ಕೇಶವರಾಯ ಪ್ರಭು ಅವರಂತಹವರೇ ಅದಕ್ಕೆ ಉತ್ತರ. ಆದರ್ಶಗಳನ್ನು ಕೇವಲ ಭಾಷಣಗಳಿಂದ ಕಲಿಯಲು ಸಾಧ್ಯವಿಲ್ಲ. ತಮ್ಮ ಬದುಕಿನ ಮೂಲಕ ಅವರು ನಮಗೆ ಪ್ರೇರಣೆ ನೀಡಿದ್ದಾರೆ,” ಎಂದು ಕೇಂದ್ರ ಸಚಿವೆ ಹೇಳಿದರು.
ಕೇಶವರಾಯ ಪ್ರಭು ಅವರ ಆದರ್ಶ ಮತ್ತು ಸೇವಾ ಮಾರ್ಗದಲ್ಲಿ ನಡೆಯುವ ಶಕ್ತಿಯನ್ನು ದೇವರು ಎಲ್ಲರಿಗೂ ನೀಡಲಿ. ಅವರ ಶಿಷ್ಯರು, ಬಂಧು-ಬಾಂಧವರು ಹಾಗೂ ಪ್ರೀತಿಪಾತ್ರರಿಗೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ದೊರೆಯಲಿ ಎಂದು ಶೋಭಾ ಕರಂದ್ಲಾಜೆ ಸಂತಾಪ ಸೂಚಿಸಿದರು.

