ಉಡುಪಿ: ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯ ಜತೆಗೆ ಗುಡುಗು, ಸಿಡಿಲು ಜನ ಸಾಮಾನ್ಯರಲ್ಲಿ ಆತಂಕ ಸೃಷ್ಟಿಮಾಡಿತು. ತಗ್ಗು ಪ್ರದೇಶದಲ್ಲಿ ನೀರು ನಿಂತು ಸಮಸ್ಯೆ ಉಂಟಾಯಿತು.ಭಾನುವಾರ ಪಶ್ಚಿಮಘಟ್ಟದ ತಪ್ಪಲು ಆಗುಂಬೆ ಭಾಗದಲ್ಲಿ ಮೇಘಸ್ಫೋಟ ರೀತಿಯಲ್ಲಿ ಮಳೆ ಸುರಿದ ಪರಿಣಾಮ ಹೆಬ್ರಿ ಸುತ್ತಮುತ್ತಲಿನ ಪರಿಸರದಲ್ಲಿ ಧಾರಾಕಾರ ಮಳೆಯಾಗಿತ್ತು. ಇದೇ ರೀತಿ ಉಡುಪಿ, ಮಣಿಪಾಲ ಸುತ್ತಮುತ್ತಲೂ ಸೋಮವಾರ ರಾತ್ರಿ 7.30ರಿಂದ 10 ಗಂಟೆವರೆಗೆ ಮಳೆ ಸುರಿದಿದೆ.

ನಿರಂತರ ಗುಡುಗು, ಸಿಡಿಲಿನ ಪರಿಣಾಮ ಜನರು ಬೆಚ್ಚಿ ಬಿದ್ದಿದ್ದು, ಹಲವೆಡೆ ಮನೆಗಳಲ್ಲಿ ವಿದ್ಯುತ್ ಪರಿಕರಗಳಿಗೆ ಹಾನಿ ಸಂಭವಿಸಿದೆ. ಒಂದು ಗಂಟೆಗೂ ಅಧಿಕ ನಿರಂತರ ಮಳೆ ಸುರಿದ ಪರಿಣಾಮ ಚರಂಡಿ ತುಂಬಿ ರಸ್ತೆಯ ಮೇಲೆ ನದಿಯಂತೆ ನೀರು ಹರಿದಿದೆ. ಸಂಜೆ ವೇಳೆ ಮನೆಯಿಂದ ಹೊರಗಡೆ ಹೋದವರು, ಕಚೇರಿ ಕಾರ್ಯ ಮುಗಿಸಿ ಮನೆಗೆ ಹೋಗುತ್ತಿರುವವರು ಮಳೆಯಲ್ಲಿ ಸಿಲುಕಿದ್ದು, ಮಾತ್ರವಲ್ಲದೆ ಗುಡುಗು, ಸಿಡಿಲಿಗೆ ನಲುಗಿ ಹೋಗಿದ್ದರು.
ಗಾಳಿ, ಸಿಡಿಲಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು