ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ 80 ಬಡಗುಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ₹3.30 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಬುಧವಾರ ಚಾಲನೆ ನೀಡಿದರು.
ಶಾಸಕರ ಶಿಫಾರಸ್ಸಿನ ಮೇರೆಗೆ ₹2.55 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಿರುವ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು, ಈಗಾಗಲೇ ₹75 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿರುವ ರಸ್ತೆ ಕಾಮಗಾರಿಗಳನ್ನು ಉದ್ಘಾಟಿಸಿದರು.
₹75 ಲಕ್ಷ ವೆಚ್ಚದಲ್ಲಿ ಕುಕ್ಕುದಕಟ್ಟೆ ರಸ್ತೆ ಅಭಿವೃದ್ಧಿಗೆ ₹20 ಲಕ್ಷ, ಗೋಪಾಲ ನಾಯಕ್ ಮನೆ ತನಕ ರಸ್ತೆ ಅಭಿವೃದ್ಧಿಗೆ ₹15 ಲಕ್ಷ, ಶಾಂತಿನಗರ ಸಿದ್ಧಿವಿನಾಯಕ ಸ್ಟೋರ್ಸ್ ಬಳಿ ರಸ್ತೆ ಅಭಿವೃದ್ಧಿಗೆ ₹25 ಲಕ್ಷ ಹಾಗೂ ರಾಜೀವನಗರ ಅಡ್ಡರಸ್ತೆ ಅಭಿವೃದ್ಧಿಗೆ ₹15 ಲಕ್ಷ ವೆಚ್ಚ ಮಾಡಲಾಗಿದೆ.
ಇನ್ನು ₹2.55 ಕೋಟಿ ಅನುದಾನದಲ್ಲಿ ಆರ್ಬಿ ದಶರಥ ನಗರ ರಸ್ತೆ ಅಭಿವೃದ್ಧಿಗೆ ₹2 ಕೋಟಿ, ರಾಜೀವನಗರ ರಸ್ತೆ ಅಭಿವೃದ್ಧಿಗೆ ₹25 ಲಕ್ಷ, ಆರ್ಬಿ ವೈಷ್ಣವಿ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿಗೆ ₹15 ಲಕ್ಷ ಹಾಗೂ ಕಬ್ಯಾಡಿ ಲಕ್ಷ್ಮೀನಾರಾಯಣ ಪ್ರಭು ಮನೆ ಬಳಿ ರಸ್ತೆ ಅಭಿವೃದ್ಧಿಗೆ ₹15 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಪೇಂದ್ರ ನಾಯಕ್, 80 ಬಡಗುಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವ ಕೋಟ್ಯಾನ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಪಕ್ಷದ ಹಿರಿಯರು, ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

