ಉಡುಪಿ: ವಿದೇಶಿ ಶಕ್ತಿಗಳ ಕುಮ್ಮಕ್ಕಿನಿಂದಾಗಿ ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿಯವರು ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಕಣ್ಣಿನಿಂದ ನೋಡಿ ಅರಾಜಕತೆ ಸೃಷ್ಟಿಸುವ – ದುಸ್ಸಾಹಸ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಆರೋಪಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೈನ್ಯ, ಸೈನಿಕರು, ರಾಷ್ಟ್ರ ಧ್ವಜ, ಲಾಂಛನದ ಬಗ್ಗೆ ಗೌರವ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಚುನಾವಣೆ, ಆಯೋಗದ ವಿರುದ್ಧ ಆರೋಪ ಎಸಗಿ ಪಲಾಯನ ಮಾಡುತ್ತಿರುವುದು ಸರಿಯಲ್ಲ.. ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಹಾಗೂ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೂ ಉತ್ತರನೀಡಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿಯವರು ಪ್ರಜಾತಂತ್ರ ಕಾಯುವ ಚುನಾವಣಾ ಆಯೋಗದ ಗೌರವಕ್ಕೆ ಚ್ಯುತಿ ತರುವಂತಹ ದುಸ್ಸಾಹಸಕ್ಕೆ ಕೈ ಹಾಕಿ ಜಗತ್ತಿನ ಎದುರು ಬೆತ್ತಲಾಗಿದ್ದಾರೆ. ಸ್ವಾತಂತ್ರೋತ್ಸವದ ಈ ಸಂದರ್ಭದಲ್ಲಿ ದೇಶದ ಆತ್ಮಗೌರವಕ್ಕೆ ಕಳಂಕ ತರುವ ಹುನ್ನಾರ ಮಾಡುವ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕಿದೆ ಎಂದರು.

