ಉಡುಪಿ: ಕೃಷ್ಣನೂರು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನಿಸಲಾಯಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಮೋದಿಯವರಿಗೆ ಬಿರುದು ನೀಡಿ ಸನ್ಮಾನಿಸಿದರು. ಇದೇ ವೇಳೆ ಅವರು, ಕಾಶಿ ಕಾರಿಡಾರ್ ರೀತಿಯಲ್ಲಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಪ್ರಧಾನಿ ಬಳಿ ಮನವಿ ಮಾಡಿದರು. ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು.
ಮೋದಿ ಅವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಪುತ್ತಿಗೆ ಶ್ರೀಗಳು ಕಂಕಣ ಕಟ್ಟಿದರು. ರಾಷ್ಟ್ರ ರಕ್ಷಣೆಯ ಉದ್ದೇಶದಿಂದ ಮೋದಿಗೆ ಶ್ರೀಗಳು ರಕ್ಷೆ ಕಟ್ಟಿದ್ದಾರೆ. ಬೆಳ್ಳಿಯ ಕಡಗೋಲು ಸಹಿತ ಉಡುಪಿ ಕೃಷ್ಣನ ಭಾವಚಿತ್ರ ಉಡುಗೊರೆಯಾಗಿ ನೀಡಿದರು. ಬಳಿಕ ಪೇಟ ತೊಡಿಸಿ ಉಡುಪಿ ಪುತ್ತಿಗೆ ಶ್ರೀ ಗಳಿಂದ ಗೌರವ ನೀಡಲಾಯಿತು.
ಶ್ರೀಕೃಷ್ಣ ಮಠದ ಒಳಗೆ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯ ಪುತ್ತಿಗೆ ಶ್ರೀಪಾದರು ವಿಶೇಷ ಪ್ರಸಾದಗಳನ್ನು ನೀಡಿದ್ದಾರೆ. ಮಾಧ್ವ ಸಂಪ್ರದಾಯಸ್ಥರು ಇರಿಸುವ ಅಂಗಾರಕ ಅಕ್ಷತೆ ತಿಲಕವನ್ನು ಮೋದಿಗೆ ಇರಿಸಲಾಯಿತು. ಬೆಳ್ಳಿಯ ತುಳಸಿ ಮಾಲೆಯನ್ನು ನೀಡಿದ ಸ್ವಾಮೀಜಿ, ಶ್ರೀ ಕೃಷ್ಣನ ವಿಶೇಷ ಪ್ರಸಾದ ಮತ್ತು ತೀರ್ಥವನ್ನು ನೀಡಿದರು.
ವೇದಿಕೆಯಲ್ಲಿ ಭಾಷಣ ಮಾಡಿದ ಮೋದಿ, ಭಗವಂತ ಶ್ರೀಕೃಷ್ಣನ ದರ್ಶನದ ಸಂತೃಪ್ತಿ ಹಾಗೂ ಭಗವದ್ಗೀತೆಯ ಪಾರಾಯಣದ ಸಂತುಷ್ಟಿ ನನ್ನ ಪಾಲಿಗೆ ಸಿಕ್ಕಿದ್ದು ನನ್ನ ಪುಣ್ಯ. ನೀವೆಲ್ಲರೂ ಇಟ್ಟಿರುವ ನಿರೀಕ್ಷೆಯನ್ನು ಪೂರ್ಣಗೊಳಿಸಲು ಭಗವಂತ ನನಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ನುಡಿದರು.
ಕಳೆದ ವರ್ಷ ನಾನು ದ್ವಾರಕಾಧೀಶನ ದರ್ಶನಕ್ಕಾಗಿ ಹೋಗಿದ್ದೆ. ಇಂದು ನಾನು ಕೃಷ್ಣನನ್ನು ದರ್ಶಿಸಿದಾಗ ಅದೇ ಅನುಭೂತಿ ದೊರಕಿದೆ. ಉಡುಪಿಯು 1968 ರಿಂದ ಬಿಜೆಪಿಯೊಂದಿಗೆ ಹಲವು ಸಂಬಂಧ ಹೊಂದಿದೆ. ಇದು ಅತ್ಯಂತ ಸ್ವಚ್ಛ ನಗರಿಯಾಗಿ ಹೆಸರಾಗಿದೆ. 1970 ರ ದಶಕದಲ್ಲಿಯೇ ಉಡುಪಿ ಹಲವು ಕ್ರಾಂತಿಕಾರಿ ಅಭಿಯಾನಗಳನ್ನು ಶುರುಮಾಡಿತ್ತು ಎಂದರು.
ಕಲಿಯುಗದಲ್ಲಿ ಭಗವಂತನ ಸ್ಮರಣೆ ಹಾಗೂ ಲೀಲೆಗಳ ಚಿಂತನೆ ಒಂದೇ ಭವಸಾಗರದಿಂದ ಮುಕ್ತಿ ನೀಡುತ್ತದೆ. ಗೀತೆಯ ಶ್ಲೋಕಗಳ ಪಾಠವು ಶತಮಾನಗಳಿಂದ ನಡೆಯುತ್ತಿದೆ. ಆದರೆ 1 ಲಕ್ಷ ಮಂದಿ ಸಂತರು ಒಂದೇ ಕಂಠದಲ್ಲಿ ಪಠಣ ಮಾಡಿರುವುದು ಇದೇ ಮೊದಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

