ಮಂಗಳೂರು: ‘ಜಾತಿ ಗಣತಿ ವಿಚಾರದಲ್ಲಿ ಸ್ವಾಮೀಜಿ ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬಿ.ಕೆ.ಹರಿ ಪ್ರಸಾದ್ ಹೇಳಿದರು. ಹರಿಪ್ರಸಾದ್ ಹೆಸರು ಉಲ್ಲೇಖಿಸದೇ ಧಾರ್ಮಿಕ ಭಾಷಣದಲ್ಲಿ ಪೇಜಾವರ ಶ್ರೀ ವಾಗ್ದಾಳಿ ನಡೆಸಿದರು. ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದರು.
ಜಾತಿ ವ್ಯವಸ್ಥೆಯನ್ನು ಅನಿಷ್ಠಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸ್ತಾ ಇದಾರೆ. ಒಂದೆಡೆ ನಾವು ಜಾತ್ಯಾತೀತರು ಅನ್ನೋದು, ಮತ್ತೊಂದೆಡೆ ಎಲ್ಲಾ ವಲಯದಲ್ಲೂ ಅದನ್ನ ಪೋಷಿಸೋದು. ನಾವೇನು ಯಾರನ್ನೂ ಕರೆದು ಹೀಗೆ ಮಾಡ್ತಾರೆ ಅಂತ ಹೇಳಿಲ್ಲ. ಲೋಕದ ವ್ಯವಸ್ಥೆ ನಮ್ಮಲ್ಲಿ ಬಂದು ನಿಮ್ಮ ಅಭಿಪ್ರಾಯ ಏನು ಅಂತ ಕೇಳಿತು. ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಅಂತ ನಮ್ಮ ಅಭಿಪ್ರಾಯ.
ನಾವು ಹೇಳಿದ್ದು ತಪ್ಪಂತೆ, ಪುಡಿ ರಾಜಕಾರಣ ಮಾಡ್ತಾ ಇದಾರೆ ಅಂತಾರೆ ಹಾಗಾದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ವೋ ಹೇಳಿ, ಹೌದು ಅಂತಾದ್ರೆ ಒಬ್ಬ ಮಾಠಾಧಿಪತಿಗೆ ಅಂತಲ್ಲ, ಸಾಮಾನ್ಯ ಪ್ರಜೆಗೂ ಮಾತಾಡುವ ಹಕ್ಕಿದೆ. ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡ್ತೇನೆ ಅನ್ನೋದ್ರ ಅರ್ಥವೇನು?. ಸಮಾಜದಲ್ಲಿ ಮಾತನಾಡುವ ಹಕ್ಕಿರೋದು ಕೆಲವು ರಾಜಕಾರಣಿಗಳಿಗೆ ಮಾತ್ರ ಅಂತಾನಾ. ಪ್ರಜೆಗಳಿಗೂ ಹಕ್ಕಿಲ್ಲ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಅಂತ ಹೇಳಲಿ.
ಪ್ರಜಾಪ್ರಭುತ್ವ ಸತ್ತು ಹೋಯ್ತು, ಈಗ ಇರೋದು ರಾಜಕಾರಣಿಗಳ ರಾಜ್ಯ ಅಂತ ಹೇಳಿ ಬಿಡಲಿ, ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪೀಠಾಧಿಪತಿ ಮಾತ್ರ ಅಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಲೇಬೇಕು. ಹಾಗಾಗಿ ನಾವು ಅದನ್ನ ಮಾತ್ರ ಮಾಡಿದ್ದೇವೆಯೇ ಹೊರತು ಬೇರೆ ಮಾಡಿಲ್ಲ. ಹಾಗಾಗಿ ಇಂಥಹ ರಾಜಕಾರಣಿಗಳಿಗೆ ಸದ್ಭುದ್ದಿ ಕೊಡು ಅಂತ ದೇವರಲ್ಲಿ ಕೇಳ್ತಾ ಇದೀವಿ, ನಮ್ಮ ಪಂಗಡದೊಳಗೆ ಯಾರಿಗೆಲ್ಲಾ ವೈಮನಸ್ಸು ಇದ್ಯೋ ಅದು ದೂರವಾಗಲಿ ಎಂದರು.

