ಉಡುಪಿ : ಬ್ರಹ್ಮಾವರ ತಾಲೂಕಿನ ಹೇರಂಜೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಪುಟ್ಟ ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವನ್ನಪ್ಪಿದೆ. ಕ್ಷಣಾರ್ಧದಲ್ಲಿ ಸಂಭವಿಸಿದ ಈ ದುರಂತ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದ್ದು, ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ವಿಧಿಯಾಟವೆಂದರೆ ಇದೇ ಇರಬೇಕು. ತಾಯಿ ತನ್ನ ಆರು ವರ್ಷದ ಮಗಳನ್ನು ಶಾಲೆಗೆ ಬಿಡಲು ಮನೆ ಬಿಟ್ಟು ಹೊರಟಿದ್ದರು. ಕಂಕುಳಲ್ಲಿ ಒಂದೂವರೆ ವರ್ಷದ ಮಗ ದಕ್ಷನನ್ನು ಎತ್ತಿಕೊಂಡೇ ನಡೆದು ಹೋಗುತ್ತಿದ್ದರು. ಅಷ್ಟರಲ್ಲೇ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ಹಸಿ ತೆಂಗಿನಕಾಯಿಯೊಂದು ಕಳಚಿ ನೇರವಾಗಿ ಮಗುವಿನ ತಲೆಯ ಮೇಲೆ ಬಿದ್ದಿದೆ.

ಬೀಳುವ ವೇಗ ಮತ್ತು ಬಲ ಎಷ್ಟಿತ್ತೆಂದರೆ, ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ತಲೆ ಭಾಗ ಒಂದು ಇಂಚಿಗೂ ಹೆಚ್ಚು ಆಳಕ್ಕೆ ಜಜ್ಜಿ ಹೋಗಿದೆ. ಘಟನೆಯಿಂದ ತಾಯಿ ಬೆಚ್ಚಿಬಿದ್ದರೆ, ಸ್ಥಳದಲ್ಲಿದ್ದವರು ಕೂಡ ಕೆಲ ಕ್ಷಣ ಏನಾಗಿದೆಯೆಂದು ಅರಿಯಲಾಗದೆ ಕಂಗಾಲಾಗಿದ್ದಾರೆ.

ಮಗುವಿನ ಮೇಲೆ ತೆಂಗಿನಕಾಯಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದರು. ಸ್ಥಳೀಯ ವ್ಯಕ್ತಿಯೊಬ್ಬರು ಮಗುವಿನ ಉಸಿರಾಟ ಪುನರುಜ್ಜೀವನಗೊಳಿಸಲು ಸಿಪಿಆರ್ ಕೂಡ ನೀಡಿದರು. ಬಳಿಕ ಮಗುವನ್ನು ತುರ್ತಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸಂಜೆ ವೇಳೆಗೆ ಮಗು ಕೊನೆಯುಸಿರೆಳೆದಿದೆ. ಮೃತ ದಕ್ಷ, ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಕ್ಯಾಂಟೀನ್ ನಡೆಸುತ್ತಿರುವ ಪ್ರಶಾಂತ್ ಪೂಜಾರಿ ಮತ್ತು ಸುಚಿತ್ರಾ ಪೂಜಾರಿ ದಂಪತಿಯ ಪುತ್ರ.

ಸಾಮಾನ್ಯವಾಗಿ ಹಿರಿಯ ಮಗಳನ್ನು ಶಾಲೆಗೆ ಕರೆದೊಯ್ಯುವ ವೇಳೆ ತಾಯಿ ಚಿಕ್ಕ ಮಗುವನ್ನು ಜೊತೆಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಆದರೆ ಈ ಬಾರಿ ದುರಾದೃಷ್ಟವಶಾತ್ ಮಗುವನ್ನು ಕಂಕುಳಲ್ಲಿ ಹೊತ್ತುಕೊಂಡೇ ಹೊರಟಿದ್ದರು. ಮಳೆಯೂ ಇಲ್ಲದ ಕಾರಣ ಯಾವುದೇ ಅಪಾಯದ ಸುಳಿವು ಇರಲಿಲ್ಲ. ಅದರಲ್ಲೂ ಮಗುವಿನ ಮೇಲೆ ಬಿದ್ದಿದ್ದು ಒಣಗಿದ ತೆಂಗಿನಕಾಯಿಯಲ್ಲ, ಭಾರವಾದ ಹಸಿ ತೆಂಗಿನಕಾಯಿ. ಕ್ಷಣಾರ್ಧದಲ್ಲಿ ಸಂಭವಿಸಿದ ಈ ದುರಂತ ಒಂದು ಅಮಾಯಕ ಜೀವವನ್ನೇ ಬಲಿ ಪಡೆದಿದೆ.

ಯಾವುದೇ ನಿರ್ಲಕ್ಷ್ಯವಿಲ್ಲ, ಯಾವುದೇ ತಪ್ಪಿಲ್ಲ. ಆದರೆ ವಿಧಿಯ ಕ್ರೂರಾಟಕ್ಕೆ ಒಂದೂವರೆ ವರ್ಷದ ಕಂದಮ್ಮ ಬಲಿಯಾಗಿದೆ. ಮಗುವಿನ ನಗುವಿನಿಂದ ಕಂಗೊಳಿಸುತ್ತಿದ್ದ ಮನೆ ಇಂದು ಮೌನವಾಗಿದೆ. ಈ ದಾರುಣ ಘಟನೆ ಕೇವಲ ಒಂದು ಕುಟುಂಬವನ್ನಷ್ಟೇ ಅಲ್ಲ, ಇಡೀ ಹೇರಂಜೆ ಗ್ರಾಮವನ್ನೇ ತಲ್ಲಣಗೊಳಿಸಿದ್ದು, ಎಲ್ಲರ ಕಣ್ಣಲ್ಲೂ ಕಣ್ಣೀರಿನ ಹನಿ ಮೂಡಿಸಿದೆ.

View this post on Instagram

A post shared by News Karnataka (@newskarnataka)