ಉಡುಪಿ: ಆರೂರು ಗ್ರಾಮದಲ್ಲಿ ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯ ನಿರ್ಲಕ್ಷ್ಯ ಈಗ ರೈತರ ಬದುಕಿಗೆ ದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ. ಕಾಮಗಾರಿ ವೇಳೆ ನದಿಗೆ ಹಾಕಿದ್ದ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸದ ಕಾರಣ ನದಿಯ ಹರಿವಿನ ದಿಕ್ಕೇ ಬದಲಾಗಿದ್ದು, ಅಪಾರ ಪ್ರಮಾಣದ ಕೃಷಿಭೂಮಿ ನದಿ ಪಾಲಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಭಾರೀ ಹಾನಿ ಅನುಭವಿಸಿದ್ದ ರೈತರು, ಈ ಬಾರಿಯೂ ಅದೇ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ.

ಒಂದು ಕಾಲದಲ್ಲಿ ರೈತರ ಕೃಷಿಗೆ ಜೀವನಾಡಿಯಾಗಿದ್ದ ಈ ಹೊಳೆ, ಇಂದು ಅವರ ಪಾಲಿಗೆ ಆತಂಕದ ಮೂಲವಾಗಿದೆ. ವಾರಾಹಿಯಿಂದ ಮಣಿಪಾಲಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಕಾಮಗಾರಿ ವೇಳೆ ನದಿಗೆ ಅಡ್ಡಲಾಗಿ ಮಣ್ಣು ಹಾಗೂ ಕಲ್ಲುಗಳನ್ನು ಹಾಕಲಾಗಿತ್ತು. ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಅವುಗಳನ್ನು ತೆರವುಗೊಳಿಸದ ಕಾರಣ, ನೀರಿನ ಸಹಜ ಹರಿವು ಸಂಪೂರ್ಣ ಬದಲಾಗಿದೆ.

ನೀರಿನ ಹರಿವು ಕೃಷಿಭೂಮಿಯತ್ತ ತಿರುಗಿರುವ ಪರಿಣಾಮ, ಕಳೆದ ಮಳೆಗಾಲದಲ್ಲೇ ಹಲವು ಎಕರೆ ಭತ್ತದ ಗದ್ದೆಗಳು ನದಿ ಪಾಲಾಗಿವೆ. ಭತ್ತದ ಜೊತೆಗೆ ತರಕಾರಿ ಬೆಳೆಗಳಿಗೂ ಹಾನಿಯಾಗಿದ್ದು, ಪಂಪ್‌ಹೌಸ್ ಸೇರಿದಂತೆ ಅನೇಕ ಮರಗಳೂ ನೀರಿನಲ್ಲಿ ಕೊಚ್ಚಿಹೋಗಿವೆ. ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಈ ಬಾರಿ ಮಳೆಗಾಲ ಆರಂಭವಾಗಿರುವುದರಿಂದ ಮತ್ತೊಮ್ಮೆ ಇದೇ ಪರಿಸ್ಥಿತಿ ಎದುರಾಗುವ ಭೀತಿ ಎದುರಾಗಿದೆ. ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೃತಕ ನೆರೆಯಿಂದ ಕೃಷಿಭೂಮಿ ಉಳಿಸಿಕೊಳ್ಳುವುದು ಈಗ ರೈತರಿಗೆ ದೊಡ್ಡ ಸವಾಲಾಗಿದೆ.

ನದಿಯಲ್ಲಿರುವ ಮಣ್ಣು ಮತ್ತು ಕಲ್ಲುಗಳನ್ನು ತಕ್ಷಣ ತೆರವುಗೊಳಿಸಿ, ಶಾಶ್ವತವಾಗಿ ತಡೆಗೋಡೆ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಇಲ್ಲದಿದ್ದರೆ ಈ ಮಳೆಗಾಲದಲ್ಲೂ ಮತ್ತಷ್ಟು ಕೃಷಿಭೂಮಿ ನದಿ ಪಾಲಾಗಲಿದ್ದು, ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.

ಕಾಮಗಾರಿ ಪೂರ್ಣಗೊಂಡ ಬಳಿಕವೂ ನಿರ್ಲಕ್ಷ್ಯದಿಂದ ಉಳಿದಿರುವ ಮಣ್ಣಿನ ರಾಶಿ, ಈಗ ರೈತರ ಬದುಕನ್ನೇ ನುಂಗುವ ಮಟ್ಟಿಗೆ ಸಮಸ್ಯೆ ಸೃಷ್ಟಿಸಿದೆ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.