ಉಡುಪಿ: ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪರಂಪರಾ (ಐಕೆಎಸ್), ನುಕ್ಸರ್ ವಿಜ್ಞಾನ ವಿಭಾಗ ಹಾಗೂ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಮಹಾವಿದ್ಯಾಲಯದ ಜಂಟಿ ಸಹಯೋಗದಲ್ಲಿ, ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ ಜ್ಯೋತಿರ್ವಿಜ್ಞಾನ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಅ.31ರಂದು ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದ ಭೀಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್‌ಎಂಎಸ್‌ಪಿ ಸಂಸ್ಕೃತ ಮಹಾವಿದ್ಯಾಲಯದ ಜ್ಯೋತಿಷ ವಿಭಾಗದ ಪ್ರಾಧ್ಯಾಪಕ ಡಿ. ಶಿವಪ್ರಸಾದ ತಂತ್ರಿ ತಿಳಿಸಿದರು.

ಶ್ರೀಕೃಷ್ಣ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9.30ಕ್ಕೆ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. (ಡಾ.) ಎಂ.ಎಸ್. ಮೂಡಿತ್ತಾಯ ಅವರು ‘ಜ್ಯೋತಿರ್ವಿಜ್ಞಾನಮ್’ ಸಂಶೋಧನಾ ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಜ್ಯೋತಿಷ ಪ್ರಾಧ್ಯಾಪಕ ಪ್ರೊ. ಎ. ಶ್ರೀಪಾದ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ಪ್ರಾಚೀನ ಭಾರತೀಯ ಜ್ಯೋತಿಷಶಾಸ್ತ್ರ ಹಾಗೂ ಆಧುನಿಕ ವಿಜ್ಞಾನಕ್ಕೆ ಸಂಬಂಧಿಸಿದಂತೆ ನಾಲ್ಕು ಗೋಷ್ಠಿಗಳು ನಡೆಯಲಿವೆ. ನಿಟ್ಟೆ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವೂ ನಡೆಯಲಿದೆ ಎಂದು ತಿಳಿಸಿದರು.

ಸಂಜೆ 4.15ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಸಂದೇಶ ನೀಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಾ. ಹರ್ಷ ಹಲಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಹ-ನಕ್ಷತ್ರಗಳು ಹಾಗೂ ಪ್ರಾಚೀನ ಆಕಾಶ ವೀಕ್ಷಣಾ ಪದ್ಧತಿಯ ಕುರಿತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ, ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪರಂಪರಾ ವಿಭಾಗದ ನಿರ್ದೇಶಕ ಡಾ. ಸುಧೀರರಾಜ್ ಕೆ., ನುಕ್ಸರ್ ವಿಜ್ಞಾನ ವಿಭಾಗದ ನಿರ್ದೇಶಕ ಡಾ. ಅನಿರ್ಭಾನ್ ಚಕ್ರವರ್ತಿ, ಎಸ್‌ಎಂಎಸ್‌ಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಡಾ. ಅಮೃತೇಶಾಚಾರ್ಯ ಡಿ.ಎಸ್., ಡಾ. ಬಿ. ಗೋಪಾಲ ಆಚಾರ್ಯ, ಡಾ. ಅಕ್ಷತಾ ಹಾಗೂ ಡಾ. ವರ್ಷ ಉಪಸ್ಥಿತರಿದ್ದರು.