ಉಡುಪಿ: ತುಳುನಾಡಿನ ದ್ರಾವಿಡ ಜನಾಂಗದ ಬಹುತೇಕ ವರ್ಗಗಳು ಆರಾಧಿಸಿಕೊಂಡು ಬಂದಿರುವ ನಾಗರ ಪಂಚಮಿ ಶ್ರದ್ಧೆ , ಭಕ್ತಿಯಿಂದ ಸಂಪನ್ನಗೊಳ್ಳುತ್ತಿದೆ. ಸಾಮಾನ್ಯವಾಗಿ ನಾಗಾರಾಧನೆಯಲ್ಲಿ ತೊಡಗುವವರು ಬಹುತೇಕ ಹಿಂದೂಗಳು ಮಾತ್ರ. ಅಲ್ಲೊಂದು ಇಲ್ಲೊಂದು ಇದಕ್ಕೆ ಅಪವಾದ ಇರುವುದನ್ನು ನಾವು ಕಾಣುತ್ತೇವೆ.
ಉಡುಪಿ ಜಿಲ್ಲೆಯ ತೆಂಕ ಎರ್ಮಾಳ್ ಎಂಬಲ್ಲಿಯ ಅಮೀನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ಮೂವರು ಮುಸ್ಲಿಂ ಬಾಂಧವರು ನಾಗಸ್ವರ ನುಡಿಸುತ್ತಿರುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಲಯಬದ್ಧವಾದ ನಾಗಸ್ವರವನ್ನು ನುಡಿಸುತ್ತಿರುವ ಮೂವರು ಮುಸ್ಲಿಮರು ಇದನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಕರಾವಳಿಯ ನಾಗಾರಾಧನೆಯಲ್ಲಿ ಹಿಂದೂ ಮುಸ್ಲಿಂ ಸೌಹಾರ್ದದ ಎಳೆಯೊಂದು ಬೆಸೆದುಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಅಬ್ದುಲ್ ರಜಾಕ್ ,”ನಾನು 35 ವರ್ಷಗಳಿಂದ ನಾಗಸ್ವರ ನುಡಿಸುತ್ತಾ ಬಂದಿದ್ದೇನೆ.ಇನ್ನೊಬ್ಬರು 11 ವರ್ಷಗಳಿಂದ ನುಡಿಸುತ್ತಿದ್ದಾರೆ. ಕಾಪು ಜನಾರ್ಧನ ದೇವಸ್ಥಾನದಲ್ಲೂ ನಾಗಸ್ವರ ನುಡಿಸುತ್ತೇವೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅಮೀನ್ ಮೂಲಸ್ಥಾನದ ಅಧ್ಯಕ್ಷ ಕೆ.ಸಿ ಅಮೀನ್ ,” ನಮ್ಮಲ್ಲಿ ನಾಗರಪಂಚಮಿ ಸಂಭ್ರಮ. ದೇವರಿಗೆ ವಿಶೇಷ ನಾಗಸ್ವರ ಸೇವೆ ಹಮ್ಮಿಕೊಂಡಿದ್ದೇವೆ. ವಿಶೇಷವಾಗಿ ದೇವರಿಗೆ ಈ ನಾಗಸ್ವರ ನುಡಿಸುವವರು ಅಬ್ದುಲ್ ರಝಾಕ್ ಮತ್ತವರ ಇಬ್ಬರು ಸಂಗಡಿಗರು. ಇವರು ತಲೆತಲಾಂತರಗಳಿಂದ ನಾಗಸ್ವರ ವಾದನ ಮಾಡುತ್ತಾ ಬಂದಿದ್ದಾರೆ.
ಮುಸ್ಲಿಂ ಸಮುದಾಯದವರಾಗಿದ್ದರೂ ನಮ್ಮ ಮೂಲಸ್ಥಾನದ ಹಲವು ಧಾರ್ಮಿಕ ಕಾರ್ಯಗಳಿಗೆ ನಾಗಸ್ವರ ನುಡಿಸುವ ಮೂಲಕ ನಮ್ಮ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಬಹುತೇಕ ಹಿಂದೂಗಳೇ ಅನುಸರಿಸುವ ನಾಗಾರಾಧನೆಯಲ್ಲಿ ನಾಗಸ್ವರ ನುಡಿಸುವ ಮುಸ್ಲಿಂ ಬಾಂಧವರು ಕರಾವಳಿಯ ಸೌಹಾರ್ದತೆಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ.

