ಉಡುಪಿ: ನಿತ್ಯ ನಾಲ್ಕು ಗೋಡೆಗಳ ನಡುವೆ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು, ತರಗತಿಯಾಚೆಗೆ ಬದುಕಿನ ಪಾಠ ಕಲಿಯುವ ಅವಕಾಶ ಪಡೆದರು. ಟೆಂಟ್ ನಿರ್ಮಿಸುವುದರಿಂದ ಹಿಡಿದು ಅಡುಗೆ ತಯಾರಿಸುವವರೆಗೆ ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಂಡು ಸ್ವಾವಲಂಬನೆಯ ಅನುಭವ ಪಡೆದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ವತಿಯಿಂದ ಇಂದ್ರಾಣಿ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ರೋವರ್–ರೇಂಜರ್ಸ್ ವಿಶೇಷ ಶಿಬಿರದಲ್ಲಿ ಜಿಲ್ಲೆಯ 21 ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಶಿಬಿರದಲ್ಲಿ ವಿದ್ಯಾರ್ಥಿಗಳು ತಮ್ಮ ವಾಸ್ತವ್ಯಕ್ಕೆ ಬೇಕಾದ ಟೆಂಟ್‌ಗಳನ್ನು ತಾವೇ ನಿರ್ಮಿಸಿಕೊಂಡಿದ್ದಾರೆ. ರಾತ್ರಿ ಹೊರಾಂಗಣದಲ್ಲಿ ವಾಸ್ತವ್ಯ ಮಾಡುವುದು, ಸೀಮಿತ ಸೌಲಭ್ಯಗಳಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸುವುದು ಸೇರಿದಂತೆ ಹಲವು ಅನುಭವಗಳನ್ನು ಅವರು ಪಡೆದುಕೊಳ್ಳುತ್ತಿದ್ದಾರೆ.
ಪೆಟ್ರೋಲ್ ಸಿಸ್ಟಂ ಮೂಲಕ ಅನ್ನ, ಸಾಂಬಾರು, ಚಪಾತಿ, ಪಲ್ಯ ಸೇರಿದಂತೆ ವಿವಿಧ ಆಹಾರಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸಿಕೊಂಡು ಸೇವಿಸುತ್ತಿದ್ದಾರೆ. ಈ ಮೂಲಕ ಸ್ವಾವಲಂಬನೆಯ ಜೊತೆಗೆ ತಂಡವಾಗಿ ಕಾರ್ಯನಿರ್ವಹಿಸುವ ಕೌಶಲವನ್ನೂ ಬೆಳೆಸಿಕೊಳ್ಳುತ್ತಿದ್ದಾರೆ.
ತರಗತಿಯಾಚೆ ಬದುಕಿನ ಪಾಠ
ಶಿಬಿರವು ಕೇವಲ ಟೆಂಟ್ ಹಾಕಿ ವಾಸ್ತವ್ಯ ಮಾಡುವ ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ. ಶಿಸ್ತು, ನಾಯಕತ್ವ, ತಂಡದ ಮನೋಭಾವ, ಸ್ವಾವಲಂಬನೆ ಹಾಗೂ ಜೀವನ ಕೌಶಲಗಳನ್ನು ಪ್ರಾಯೋಗಿಕವಾಗಿ ಕಲಿಸುವ ಉದ್ದೇಶ ಹೊಂದಿದೆ.
ನಾಲ್ಕು ಗೋಡೆಗಳ ತರಗತಿಯಲ್ಲಿ ಕಲಿಯುವ ಜ್ಞಾನಕ್ಕೆ ಪೂರಕವಾಗಿ, ಪ್ರಕೃತಿಯ ನಡುವೆ ಬದುಕುವುದು, ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಅಗತ್ಯಗಳನ್ನು ಪೂರೈಸುವುದು ಹಾಗೂ ಸಮಸ್ಯೆ ಎದುರಾದಾಗ ಒಟ್ಟಾಗಿ ಪರಿಹಾರ ಕಂಡುಕೊಳ್ಳುವ ಅನುಭವವನ್ನು ವಿದ್ಯಾರ್ಥಿಗಳಿಗೆ ಶಿಬಿರ ನೀಡುತ್ತಿದೆ.
ಮೊಬೈಲ್ ಹಾಗೂ ಆಧುನಿಕ ಜೀವನಶೈಲಿಯ ನಡುವೆ ಬೆಳೆಯುತ್ತಿರುವ ಯುವಜನತೆಗೆ ಪ್ರಕೃತಿಯೊಂದಿಗೆ ಬೆರೆಯುವ ಮತ್ತು ಸ್ವಾವಲಂಬಿಯಾಗಿ ಬದುಕುವ ಅನುಭವ ಅಗತ್ಯ. ಇಂತಹ ಶಿಬಿರಗಳು ಕಷ್ಟಗಳನ್ನು ಎದುರಿಸುವ ಮನೋಭಾವ ಹಾಗೂ ಆತ್ಮವಿಶ್ವಾಸ ಬೆಳೆಸಲು ನೆರವಾಗುತ್ತವೆ.
ಪಠ್ಯಪುಸ್ತಕದ ಜ್ಞಾನ ಮಾತ್ರವಲ್ಲದೆ, ಬದುಕನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳೇ ಟೆಂಟ್ ನಿರ್ಮಿಸಿ, ಅಡುಗೆ ಮಾಡಿ, ಒಟ್ಟಾಗಿ ಬದುಕಿನ ಅನುಭವ ಪಡೆಯುತ್ತಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಶಿಬಿರ ನಡೆಯುತ್ತಿದೆ. ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ. ಅಡಿಗ, ಶಿಬಿರದ ನಾಯಕ ಹಾಗೂ ರೋವರ್ ಲೀಡರ್ ರಾಜೇಶ್ ಅವಲಕ್ಕಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

