ಉಡುಪಿ: ಒಂದೆಡೆ ಮೀನಿಗೆ ಬರ, ಮತ್ತೊಂದೆಡೆ ಹವಾಮಾನದ ವೈಪರೀತ್ಯ ಒಟ್ಟಾರೆ ನಷ್ಟದೊಂದಿಗೆ ಈ ಋತುವಿನ ಮೀನುಗಾರಿಕೆ ಮುಕ್ತಾಯಗೊಂಡಿದೆ. ಇಡೀ ಋತುವಿನಲ್ಲಿ ನಿರಂತರವಾಗಿ ಮೀನುಗಾರಿಕೆ ನಡೆಸಲಾಗದೇ ಬೋಟುಗಳು ಮೀನುಗಾರಿಕೆಯನ್ನು ಮೊಟಕುಗೊಳಿಸಿ ಲಂಗರು ಹಾಕಲಾರಂಭಿಸಿವೆ. ವಾರದಿಂದ ಸುರಿದ ಮಳೆಯಂತೂ ಮೀನುಗಾರರ ಕೊನೆಯ ಹಂತದ ಆದಾಯವನ್ನೂ ಕಸಿದುಕೊಂಡಿದೆ.
ಪ್ರತೀ ವರ್ಷ ಜೂನ್ ಒಂದರಿಂದ ಎರಡು ತಿಂಗಳು ಮೀನುಗಾರಿಕೆಗೆ ರಜೆ ಇರುತ್ತದೆ. ಈ ಅವಧಿಯಲ್ಲಿ ಆಳಸಮುದ್ರ ಬೋಟ್ ಗಳಿಗೆ ನಿಷೇಧವಿದೆ. ಆದರೆ ಈ ವರ್ಷ ಮೇ ತಿಂಗಳಲ್ಲೇ ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ನಡೆಸಲು ಆಗಿಲಿಲ್ಲ. ಜೊತೆಗೆ ಮತ್ಸ್ಯ ಕ್ಷಾಮವೂ ಸೇರಿ ಮೀನುಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಹೀಗಾಗಿ ಮೀನುಗಾರರು ಬೇಸರದಿಂದಲೇ ಈ ಋತುವಿನ ಮೀನುಗಾರಿಕೆ ಕೊನೆಗೊಳಿಸಿದ್ದಾರೆ.
ಉತ್ತಮ ಮೀನುಗಾರಿಕೆಯ ನಿರೀಕ್ಷೆಯಿಂದ 2024 ರ ಆಗಸ್ಟ್ನಲ್ಲಿ ಮೀನುಗಾರಿಕೆಗೆ ಕಡಲಿಗಿಳಿದಿದ್ದ ಮೀನುಗಾರರಿಗೆ ವರ್ಷ ಪೂರ್ತಿ ನಿರೀಕ್ಷಿಸಿದಷ್ಟು ಮೀನು ಸಿಕ್ಕಿರಲಿಲ್ಲ. ನಷ್ಟಕ್ಕೊಳಗಾದ ಹಲವು ಬೋಟ್ ಮಾಲಕರು ಮೀನುಗಾರಿಕೆ ಮುಂದುವರಿಸಲಾಗದೇ 4 ತಿಂಗಳ ಹಿಂದೆಯೇ ಬೋಟ್ಗಳನ್ನು ಬಂದರಿನಲ್ಲಿ ಲಂಗರು ಹಾಕಿದ್ದರು.
ಜನವರಿಯಲ್ಲಿ ಶೇ. 40ರಷ್ಟು ಬೋಟ್ಗಳು ಲಂಗರು ಹಾಕಿದ್ದರೆ, ಈಗ ಆ ಸಂಖ್ಯೆ ಶೇ. 80 ಕ್ಕೆ ತಲುಪಿದೆ. ಪ್ರಸ್ತುತ ಶೇ. 15-20ರಷ್ಟು ಬೋಟುಗಳು ಮಾತ್ರ ಮೀನುಗಾರಿಕೆಯಲ್ಲಿ ನಿರತವಾಗಿವೆ. ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ ಇದೆ. ಒಟ್ಟಾರೆ ಬೋಟ್ ಮತ್ತು ಮೀನು ಹಿಡಿಯುವ ಬಲೆಗಳಿಗೆ ಕೋಟಿಗೂ ಅಧಿಕ ಬಂಡವಾಳ ಹಾಕಿದ್ದ ಬೋಟ್ ಮಾಲೀಕರಿಗೆ ಈ ವರ್ಷ ನಷ್ಟವೇ ಆಗಿದೆ.

