ಉಡುಪಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವದ ವೇಳೆ ಮಣ್ಣಿನ ಕೃಷ್ಣ ಮೂರ್ತಿ ಸ್ವಾಮೀಜಿಗಳ ಕೈಯಿಂದ ಜಾರಿ ಬಿದ್ದು ಭಗ್ನಗೊಂಡಿದೆ. ಚಾತುರ್ಮಾಸದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ಉಡುಪಿಯ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವ ನಡೆಯುವ ವೇಳೆ ಈ ಅವಘಡ ಸಂಭವಿಸಿದೆ.
ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿಯವರ ಕೈಯಿಂದ ರಥದಲ್ಲಿ ರಥಾರೂಢವಾಗಿದ್ದ ಕೃಷ್ಣನ ಮಣ್ಣಿನ ಉತ್ಸವ ಮೂರ್ತಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಭಗ್ನಗೊಂಡಿದ್ದು, ಅನಿರೀಕ್ಷಿತವಾಗಿ ನಡೆದ ಈ ಘಟನೆ ನೆರೆದಿದ್ದ ಅಪಾರ ಸಂಖ್ಯೆಯ ಕೃಷ್ಣ ಭಕ್ತರಲ್ಲಿ ತೀವ್ರ ಆತಂಕ ಮೂಡಿಸಿದೆ.
ರಥೋತ್ಸವದ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಥದಿಂದ ಇಳಿಸಿ, ಮಧ್ವ ಸರೋವರದಲ್ಲಿ ವಿಸರ್ಜನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಸ್ವಾಮೀಜಿಗಳ ಕೈಯಿಂದ ಕೃಷ್ಣನ ಮೂರ್ತಿ ಆಕಸ್ಮಿಕವಾಗಿ ಜಾರಿ ಬಿದ್ದು ಕೃಷ್ಣನ ಮೂರ್ತಿ ಭಗ್ನವಾಗಿದೆ.

