ಉಡುಪಿ: ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸರು ಸೋಮವಾರ ಕುಂದಾಪುರ ಪುರಸಭೆ ಕಚೇರಿಗೆ ದಿಢೀರ್ ದಾಳಿ ನಡೆಸಿ, ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಲೋಕಾಯುಕ್ತ ಸ್ವಯಂಪ್ರೇರಿತವಾಗಿ (ಸುಮೋಟೊ) ದಾಖಲಿಸಿಕೊಂಡ ಪ್ರಕರಣಗಳ ಹಿನ್ನೆಲೆಯಲ್ಲಿ ಈ ತಪಾಸಣೆ ನಡೆಸಲಾಯಿತು. ಲೋಕಾಯುಕ್ತ ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ವೃತ್ತ ನಿರೀಕ್ಷಕ ಮಂಜುನಾಥ್ ಶಂಕರಳ್ಳಿ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಪುರಸಭೆಯಲ್ಲಿ ಬಾಕಿ ಉಳಿದಿರುವ ಕಡತಗಳು, ಉದ್ದಿಮೆ ಪರವಾನಗಿ, ಖಾತೆ ತಿದ್ದುಪಡಿ, ಖಾತೆ ವರ್ಗಾವಣೆ ಹಾಗೂ ಜನನ–ಮರಣ ಪ್ರಮಾಣಪತ್ರಗಳ ಅರ್ಜಿಗಳ ವಿಲೇವಾರಿ ಕುರಿತು ದಾಖಲೆಗಳನ್ನು ಪರಿಶೀಲಿಸಲಾಯಿತು. ಈ ಸಂಬಂಧ ಪುರಸಭೆ ಸಿಬ್ಬಂದಿಯಿಂದ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
ಲೋಕಾಯುಕ್ತ ಸಿಬ್ಬಂದಿ ರಾಘವೇಂದ್ರ ಹೊಸ್ಕೋಟೆ, ಆದರ್ಶ, ರಾಘವೇಂದ್ರ ಸಾಲಿಗ್ರಾಮ, ಸೂರಜ್ ಕಾಪು ಹಾಗೂ ರವೀಂದ್ರ ಗಾಣಿಗ ಮತ್ತು ತಾಲೂಕು ಕಚೇರಿಯ ಕಂದಾಯ ಇಲಾಖೆಯ ಹೆರಿಯ ಬಿಲ್ಲವ, ಸುಬ್ರಹ್ಮಣ್ಯ ಅವರು ಪರಿಶೀಲನಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

