ಉಡುಪಿ: ಕಾರ್ಕಳ ಪುರಸಭೆ ಹಾಗೂ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಇಂದು ದಿಢೀರ್ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿದರು.
ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದ್ದು, ಬಾಕಿ ಉಳಿದಿರುವ ಕಡತಗಳು ಹಾಗೂ ವಿಳಂಬದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಖಾತಾ ವರ್ಗಾವಣೆ, ಜನನ-ಮರಣ ಪ್ರಮಾಣಪತ್ರ, ಉದ್ದಿಮೆ ಪರವಾನಗಿ ಹಾಗೂ ಇತರೆ ಕಾರ್ಯಗಳಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು.
ಈ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಚೇರಿಯ ಎಲ್ಲ ವಿಭಾಗಗಳ ಕಡತಗಳನ್ನು ಕೂಲಂಕಷ ಪರಿಶೀಲಿಸಿದರು. ಪುರಸಭೆ ಕಚೇರಿ ಮಾತ್ರವಲ್ಲದೆ, ತಾಲೂಕು ಕಚೇರಿಯ ರೆಕಾರ್ಡ್ ರೂಂಗಳಿಗೂ ಲೋಕಾಯುಕ್ತ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ, ಕಳೆದ ಹತ್ತು ತಿಂಗಳಿಂದ ಬಾಕಿ ಉಳಿದಿದ್ದ ಪ್ರಮುಖ ಫೈಲ್ ಒಂದು ಪತ್ತೆಯಾಗಿದೆ. ಕಡತ ವಿಳಂಬಕ್ಕೆ ಸಿಬ್ಬಂದಿಯಿಂದ ಕಾರಣ ಕೇಳಿದರು. ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ತಾಕೀತು ಮಾಡಿದರು. ಈ ದಿಢೀರ್ ಭೇಟಿ ಪುರಸಭೆ ಹಾಗೂ ತಾಲೂಕು ಕಚೇರಿ ವಲಯದಲ್ಲಿ ಸಂಚಲನ ಮೂಡಿಸಿದೆ.

