ಉಡುಪಿ: ಸಮುದ್ರದಿಂದ ಹಿನ್ನೀರಿಗೆ ಬಂದಿದ್ದ ಬೃಹತ್ ಡಾಲ್ಫಿನ್‌ವೊಂದು ಹಿನ್ನೀರಿನಲ್ಲೇ ಸಿಲುಕಿ ಪರದಾಡಿದ ಘಟನೆ ಜಿಲ್ಲೆಯ ಪಡುಕರೆ–ಕುತ್ಪಾಡಿ ಸಮುದ್ರ ತೀರದಲ್ಲಿ ನಡೆದಿದೆ.
ಸಮುದ್ರಕ್ಕೆ ಮರಳಲು ಡಾಲ್ಫಿನ್ ನಿರಂತರವಾಗಿ ಪ್ರಯತ್ನಿಸಿದರೂ ಹಿನ್ನೀರಿನಲ್ಲೇ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ, ಸುರಕ್ಷಿತವಾಗಿ ಮತ್ತೆ ಸಮುದ್ರ ಸೇರಲು ಸಹಕರಿಸಿದರು.
ಸ್ಥಳೀಯರ ಸಮಯಪ್ರಜ್ಞೆ ಹಾಗೂ ಮಾನವೀಯ ಪ್ರಯತ್ನದ ಫಲವಾಗಿ ಡಾಲ್ಫಿನ್ ಯಾವುದೇ ಅಪಾಯವಿಲ್ಲದೆ ಸಮುದ್ರ ಸೇರಿತು. ಈ ಘಟನೆಯನ್ನು ಅಲ್ಲಿದ್ದವರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಪಾಯದಲ್ಲಿದ್ದ ಸಮುದ್ರ ಜೀವಿಯನ್ನು ರಕ್ಷಿಸಿದ ಸ್ಥಳೀಯರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

