ಉಡುಪಿ: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಸಿಯ ಜಿಲ್ಲಾ ಸಮ್ಮೇಳನ ಎ.12ರಂದು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಲಯನ್ಸ್ 317ಸಿಯ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಲಯನ್ ಪದಾಧಿಕಾರಿಗಳು ಹಾಗೂ ಮಲ್ಟಿಪಲ್ ಮತ್ತು ಜಿಲ್ಲಾ ನಾಯಕರ ಸಮಾಗಮದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಪ್ರಸಕ್ತ ವರ್ಷದಲ್ಲಿ ಜಿಲೆಯಲ್ಲಿ 15 ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಲಾಗಿದೆ.
ಅತಿವೃಷ್ಟಿ ಸಂದರ್ಭದಲ್ಲಿ ನಮ್ಮ ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದಿಂದ 8 ಲಕ್ಷ ರೂ. ದೇಣಿಗೆಯನ್ನು ಅಗತ್ಯ ಉಳ್ಳವರಿಗೆ ಹಂಚಲಾಗಿದೆ. ಸಮಾಜಮುಖಿ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ದವಸ ದಾನ್ಯಗಳು ಹಾಗೂ ಇತರೆ ಉಪಯುಕ್ತ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ವಿದ್ಯಾಭ್ಯಾಸ ನಿರತರಿಗೆ ನಿರಂತರವಾಗಿ ವಿದ್ಯಾರ್ಥಿ ವೇತನ, ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಬೆಂಬಲ ಹೀಗೆ ಹಲವು ಮಾದರಿಯ ಸಮಾಜಮುಖಿ ಕೆಲಸಗಳನ್ನು ನೆರವೇರಿಸಲಾಗಿದೆ ಎಂದರು.
ಲಯನ್ಸ್ ಕ್ಲಬ್ ಹಂಗಳೂರಿನ ಪ್ರಾಯೋಜಕತ್ವದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕುಂದಾಪುರದಲ್ಲಿ ರೈಲ್ವೆ ಪ್ಲಾಟ್ಫಾರ್ಮ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಲಯನ್ಸ್ ಬನ್ನಾಡಿ ವಡ್ಡರ್ಸೆಯಲ್ಲಿ ಲಯನ್ಸ್ ಕ್ಲಬ್ ನ ಪ್ರಾಯೋಜಕತ್ವದಲ್ಲಿ ಸ್ಥಳೀಯ ಶಾಲೆಗೆ ಶಾಲಾ ವಾಹನವನ್ನು ನೀಡಲಾಯಿತು.
ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಷನ್ ನಿಂದ ದೇಣಿಗೆಯಿಂದ ಬಂದ ಹಣದಿಂದ ದಾವಣಗೆರೆ ರಕ್ತ ನಿಧಿ ವಿಭಾಗಕ್ಕೆ ರಕ್ತವನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಒಂದು ವಾಹನವನ್ನು ದೇಣಿಗೆಯಾಗಿ ನೀಡಲಾಯಿತು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಥಮ ಉಪ ಗವರ್ನರ್ ಸ್ವಪ್ನ ಸುರೇಶ್, ದ್ವಿತೀಯ ಉಪ ಗವರ್ನರ್ ರಾಜೀವ್ ಕೋಟ್ಯಾನ್ ಉಪಸ್ಥಿತರಿದ್ದರು.

