ಉಡುಪಿ: ಶುದ್ಧ ಬಸವತತ್ವವನ್ನು ಪ್ರಚಾರ, ಪ್ರಸಾರ ಹಾಗೂ ಅನುಷ್ಠಾನ ಮಾಡುವ ಆಶಯದೊಂದಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಗುರುವಾರ ಉಡುಪಿಗೆ ಆಗಮಿಸಿತು. ಈ ಹಿನ್ನೆಲೆಯಲ್ಲಿ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯಿಂದ ಪುರಭವನದವರೆಗೆ ಸಾಮರಸ್ಯ ನಡಿಗೆ ನಡೆಸಲಾಯಿತು.
ಬಳಿಕ ಪುರಭವನದಲ್ಲಿ ನಡೆದ ಸಮಾವೇಶದಲ್ಲಿ ಹಿರಿಯ ಪತ್ರಕರ್ತ, ವಿಮರ್ಶಕ ರಂಜಾನ್ ದರ್ಗಾ ಮಾತನಾಡಿ, ಬಸವಣ್ಣನೆಂದರೆ ಕಲ್ಯಾಣದ ಬೆಳಕು. ಅವರ ಆದರ್ಶಗಳು ಇಂದಿಗೂ ಪ್ರಸ್ತುತ. ಜಗತ್ತಿಗೆ ಜ್ಞಾನ ನೀಡುವ ಶಕ್ತಿ ವಚನ ಸಾಹಿತ್ಯಕ್ಕಿತ್ತು. ಇದು ಸ್ವರ್ಗ, ನರಕಗಳಿಲ್ಲದ ಧರ್ಮ ಎಂದರು.
ಲಿಂಗಾಯತ ಧರ್ಮವು ಸ್ವರ್ಗ, ನರಕವನ್ನು ನಂಬದೇ ಜೀವ ಕಾರುಣ್ಯದ ಮೇಲೆ ನಿಂತಿದೆ. ಇವುಗಳ ಮೂಲಕವೇ ವಚನಗಳನ್ನು ಅರ್ಥೈಸಿಕೊಳ್ಳಬೇಕು. ಬಸವಣ್ಣನೇ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ, ಇಷ್ಟಲಿಂಗವೇ ಪೂಜಾ ಸಾಧನ. ಈ ಮಹತ್ವವನ್ನು ತಿಳಿದುಕೊಂಡರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಹುಲಸೂರು ಶ್ರೀಮಠದ ಶಿವಾನಂದ ಮಹಾಸ್ವಾಮಿ, ಹಂದಿಗುಂದ ಮಠದ ಶ್ರೀಶಿವನಾಂದ ಮಹಾಸ್ವಾಮಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿ, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು, ಧಾರವಾಡ ನವಲಗುಂದ ಗವಿಮಠದ ಶ್ರೀಬಸವಲಿಂಗ ಮಹಾಸ್ವಾಮೀಜಿ,
ಕಲಬುರ್ಗಿ ಷಣ್ಮುಖ ಶಿವಯೋಗಿಗಳ ಮಠದ ಶ್ರೀವೀರಸಿದ್ಧ ದೇವರು, ರಾಯಚೂರು ಶ್ರೀವೀರಭದ್ರ ಶಾಸ್ತಿಗಳು, ಬೆಳಗಾವಿ ಶ್ರೀಶಿವಬಸವ ದೇವರು, ಬಸವ ಕಲ್ಯಾಣದ ಶ್ರೀಬಸವರಾಜ ದೇವರು, ಮಮ್ಮಿಗಟ್ಟಿಯ ಬಸವನಂದ ಸ್ವಾಮೀಜಿ, ಬೆಳಗಾವಿ ಸೆಗುಣಿಸೆಯ ಶ್ರೀ ಡಾ. ಮಹಾಂತ ಪ್ರಭು ಸ್ವಾಮೀಜಿ ಭಾಗವಹಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಉಡುಪಿ ಜಿಲ್ಲೆ ಗೌರವಾಧ್ಯಕ್ಷ ಡಾ.ಜಿ.ಎಸ್. ಚಂದ್ರಶೇಖರ್, ಶರಣ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಅಧ್ಯಕ್ಷ ನಿರಂಜನ ಚೋಳಯ್ಯ ಉಪಸ್ಥಿತರಿದ್ದರು.
ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮುಖಂಡ ಪ್ರಸಾದ್ ರಾಜ್ ಕಾಂಚನ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಪೊಲೀಸ್ ಅದೀಕ್ಷಕ ಹರಿರಾಂ ಶಂಕರ್, ಬಸವಣ್ಣ ವೇಷಧಾರಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ನೀಲಕಂಠಯ್ಯ ಕರಕಳ್ಳಿಮಠ ಉಪಸ್ಥಿತರಿದ್ದರು.

