ಉಡುಪಿ: ಕಾಪು ತಾಲೂಕಿನ ಉದ್ಯಾವರ ಗ್ರಾಮದ ಜಾರುಕುದ್ರು ಪ್ರದೇಶದಲ್ಲಿ ಪಾಪನಾಶಿನಿ ನದಿಯ ತೀರದಲ್ಲಿ ಭೂ ಸವಕಳಿ ತೀವ್ರಗೊಂಡಿದ್ದು, ಈಗಾಗಲೇ ಎರಡು ಎಕರೆಗೂ ಅಧಿಕ ಭೂಮಿ ನದಿ ಪಾಲಾಗಿದೆ. ಮಳೆಗಾಲದಲ್ಲಿ ಸವಕಳಿ ಮತ್ತಷ್ಟು ಹೆಚ್ಚುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.
ಉದ್ಯಾವರದಲ್ಲಿ ಪಾಪನಾಶಿನಿ ನದಿ ಎರಡು ಕವಲುಗಳಾಗಿ ಹರಿದು ಮುಂದೆ ಸಮುದ್ರ ಸೇರುತ್ತದೆ. ಹೀಗಾಗಿ ಈ ಭಾಗದಲ್ಲಿ ನದಿಯ ಹರಿವಿನ ವೇಗ ಹೆಚ್ಚಾಗಿದ್ದು, ತೀರದ ಮಣ್ಣು ನಿರಂತರವಾಗಿ ಕೊಚ್ಚಿಹೋಗುತ್ತಿದೆ. ಈಗಾಗಲೇ ಹಲವು ತೆಂಗಿನ ಮರಗಳು ನದಿ ಪಾಲಾಗಿವೆ.
ಜಾರುಕುದ್ರು ಪ್ರದೇಶದಲ್ಲಿ ಸಣ್ಣ ಪ್ರಮಾಣದ ಭೂಮಿ ಹೊಂದಿರುವ ಬಡ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ನದಿ ತೀರದ ಭೂಮಿ ಸವಕಳಿಯಾಗುತ್ತಿರುವುದರಿಂದ ಮನೆಗಳಿಗೂ ಅಪಾಯ ಎದುರಾಗುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಹೊಸ ಸೇತುವೆಯ ಬುಡ ಭಾಗದಲ್ಲಿಯೂ ಮಣ್ಣು ಹಾಗೂ ಹೂಳು ರಾಶಿ ಬಿದ್ದಿದ್ದು, ನದಿಯ ಹರಿವಿಗೆ ತೊಂದರೆಯಾಗುತ್ತಿದೆ. ತುರ್ತಾಗಿ ಹೂಳು ತೆರವುಗೊಳಿಸಿ ನದಿ ತೀರದಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಿದರೆ ಸವಕಳಿಯನ್ನು ನಿಯಂತ್ರಿಸಬಹುದು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ತುರ್ತು ಕ್ರಮ ಅಗತ್ಯ: ಮಳೆಗಾಲ ಮುಂದುವರಿದಿರುವ ಹಿನ್ನೆಲೆಯಲ್ಲಿ ತಕ್ಷಣವೇ ನದಿ ತೀರ ಪರಿಶೀಲನೆ ನಡೆಸಿ, ಅಪಾಯಕಾರಿ ಸ್ಥಳಗಳಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಬೇಕು. ಇಲ್ಲವಾದಲ್ಲಿ ಮತ್ತಷ್ಟು ಭೂಮಿ ನದಿ ಪಾಲಾಗುವ ಸಾಧ್ಯತೆ ಇದ್ದು, ಬಡ ಗ್ರಾಮಸ್ಥರ ಬದುಕಿಗೂ ಅಪಾಯ ಎದುರಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

