ಉಡುಪಿ: ಜಾಗದ ಗಡಿ ವಿವಾದಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ನಡೆದ ಮಾತಿನ ಚಕಮಕಿ ಹಲ್ಲೆ ಹಾಗೂ ಬೆದರಿಕೆ ಆರೋಪಕ್ಕೆ ತಿರುಗಿದ ಘಟನೆ ಆಲೂರು ಗ್ರಾಮದಲ್ಲಿ ನಡೆದಿದೆ. ಎರಡೂ ಕಡೆಯವರು ಪರಸ್ಪರ ಹಲ್ಲೆ ಆರೋಪಿಸಿ ದೂರು ನೀಡಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಆಲೂರು ಗ್ರಾಮದ ಸರೋಜ (48) ಹಾಗೂ ನೆರೆಮನೆಯ ವಸಂತ ಶೆಟ್ಟಿ (70) ಅವರ ನಡುವೆ ಜಾಗದ ವಿಚಾರವಾಗಿ ತಕರಾರು ಇದ್ದು, ಈ ಸಂಬಂಧ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.
ಆ.16ರಂದು ಮಧ್ಯಾಹ್ನ ಸರೋಜ ಅವರು ಅಕ್ಕ ಮುಕಾಂಬು ಅವರ ಮನೆಯ ಹೊರಗಡೆ ಇದ್ದಾಗ ವಸಂತ ಶೆಟ್ಟಿ ಹಾಗೂ ಅವರ ಪುತ್ರ ಅಕ್ಷಯ ಶೆಟ್ಟಿ ಬಂದು ಜಾಗ ಮತ್ತು ಮನೆ ತಮ್ಮದೆಂದು ಹೇಳಿ ಗಲಾಟೆ ನಡೆಸಿದ್ದಾರೆ ಎಂದು ಸರೋಜ ದೂರಿದ್ದಾರೆ. ಅಕ್ಷಯ ಶೆಟ್ಟಿ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಲ್ಲದೆ, ಗದ್ದೆಯ ಬಳಿಗೆ ತೆರಳಿ ಕತ್ತಿಯಿಂದ ಮರದ ಬೇಲಿಯನ್ನು ಕಡಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ತೆರಳಿದ ಸರೋಜ ಹಾಗೂ ಮುಕಾಂಬು ಅವರನ್ನು ವಸಂತ ಶೆಟ್ಟಿ ಅವಾಚ್ಯವಾಗಿ ನಿಂದಿಸಿ, ಸಾಗುವಳಿ ಮಾಡಿದ್ದ ಗದ್ದೆಯನ್ನು ಹಾಳು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಕ್ಷಯ ಶೆಟ್ಟಿ ಹಾರೆಯಿಂದ ಮುಖಕ್ಕೆ ಹೊಡೆಯಲು ಬೀಸಿದಾಗ ಏಟು ಬಲಗೈ ಬೆರಳಿಗೆ ತಾಗಿ ರಕ್ತಗಾಯವಾಗಿದೆ ಎಂದು ಸರೋಜ ಆರೋಪಿಸಿದ್ದಾರೆ.
ಇದೇ ಘಟನೆಯ ಕುರಿತು ವಸಂತ ಶೆಟ್ಟಿ ನೀಡಿರುವ ದೂರಿನ ಪ್ರಕಾರ, ಅವರು ಸರ್ವೇ ನಂಬರ್ 26/5ರ 28 ಸೆಂಟ್ಸ್ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದು, ಹಳೆಯ ಬೇಲಿಯನ್ನು ಸರಿಪಡಿಸಲು ಪುತ್ರ ಅಕ್ಷಯ ಶೆಟ್ಟಿ ಜತೆ ತೆರಳಿದ್ದರು.
ಈ ವೇಳೆ ಸರೋಜ ಹಾಗೂ ಮುಕಾಂಬು ಬೇಲಿ ಸರಿಪಡಿಸುವುದನ್ನು ತಡೆದು ಅವಾಚ್ಯವಾಗಿ ಬೈದಿದ್ದಾರೆ. ಕೈಯಲ್ಲಿದ್ದ ಹಾರೆ ಹಾಗೂ ಕತ್ತಿಯನ್ನು ಕಸಿದುಕೊಳ್ಳಲು ಮುಂದಾಗಿದ್ದಲ್ಲದೆ, ಸರೋಜ ಮರದ ಕೋಲಿನಿಂದ ತಮ್ಮ ತಲೆಗೆ ಹೊಡೆದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಅಕ್ಷಯ ಶೆಟ್ಟಿ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಲಾಗಿದೆ. ಎರಡೂ ದೂರುಗಳ ಆಧಾರದಲ್ಲಿ ಗಂಗೊಳ್ಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

