ಉಡುಪಿ: ಮೂರು ವರ್ಷಗಳ ಹಿಂದೆ ಉದ್ಘಾಟನೆಗೊಂಡ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದೆ. ಗಬ್ಬು ನಾರುತ್ತಿರುವ ಶೌಚಾಲಯಗಳು, ಮದ್ಯದ ಬಾಟಲಿಗಳು, ಎಲ್ಲೆಂದರಲ್ಲಿ ಕಸದ ರಾಶಿ, ಕಾರ್ಯನಿರ್ವಹಿಸದ ಎಸ್ಕಲೇಟರ್‌ಗಳು ನಿಲ್ದಾಣದಲ್ಲಿನ ನಿರ್ವಹಣೆ ಕೊರತೆಗೆ ಸಾಕ್ಷಿಯಾಗಿದೆ.
ಬನ್ನಂಜೆಯಲ್ಲಿರುವ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಉಡುಪಿ ಜಿಲ್ಲಾ ಅನುಷ್ಟಾನ ಸಮಿತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದಾಗ ನಿಲ್ದಾಣದ ಅವ್ಯವಸ್ಥೆ ಬೆಳಕಿಗೆ ಬಂದಿದೆ.
ಸಮಿತಿಯ ಮೊದಲ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಸಮಸ್ಯೆಗಳ ಕುರಿತು ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ನೇತೃತ್ವದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಗೀತಾ ವಾಗ್ಳೆ, ಸತೀಶ್ ಜಪ್ತಿ, ಉಡುಪಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ ಭೇಟಿ ನೀಡಿದಾಗ ಈ ದೃಶ್ಯಗಳು ಕಂಡುಬಂದವು.

ಶೌಚಾಲಯಕ್ಕೆ ಭೇಟಿ ನೀಡಿದಾಗ ಶುಚಿತ್ವದ ಕೊರತೆಯಿಂದ ಗಬ್ಬು ವಾಸನೆ ಬೀರುತ್ತಿತ್ತು. ಪುರುಷರ ಶೌಚಾಲಯದಲ್ಲಿ ಬಿಯರ್ ಬಾಟಲಿ ಹಾಗೂ ಮಹಿಳೆ ಶೌಚಾಲಯದಲ್ಲಿ ಕಸದ ರಾಶಿ ಕಂಡುಬಂತು. ಕೂಡಲೇ ಸಮಿತಿಯವರು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡು ಶುಚಿತ್ವ ಕಾಪಾಡುವಂತೆ ಸೂಚನೆ ನೀಡಿದರು. ಅದೇ ರೀತಿ ವಿಕಲಚೇತನರ ಶೌಚಾಲಯದಲ್ಲಿ ಫ್ಲೇಶ್ ವ್ಯವಸ್ಥೆ ಇಲ್ಲದಿರುವುದು ಮತ್ತು ಗಾಲಿ ಕುರ್ಚಿಯನ್ನು ಬೇರೆಲ್ಲೋ ಇಟ್ಟಿರುವುದಕ್ಕೆ ಸಮಿತಿಯವರು ಅಸಮಾಧಾನ ವ್ಯಕ್ತಪಡಿಸಿದರು.
ಪಾರ್ಕಿಂಗ್ ಪ್ರದೇಶದಲ್ಲಿ ಗಂಟೆ ಲೆಕ್ಕದಲ್ಲಿ ಹಣ ಪಡೆದರೂ ಶುಚಿತ್ವ ಕಾಪಾಡುತ್ತಿರಲಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬಂದವು. ಅದೇ ರೀತಿ ನೆಲ ಮಹಡಿಯಿಂದ ಮೊದಲ ಮಹಡಿಗೆ ಹೋಗಲು ಇರುವ ಎರಡೂ ಎಕ್ಸಲೇಟರ್‌ನ್ನು ಬಂದ್ ಮಾಡಿ ಇಡಲಾಗಿತ್ತು. ವೃದ್ಧರು ಮಹಡಿ ಹತ್ತಿ ಹೋಗಲು ಕಷ್ಟಪಡುತ್ತಿರುವುದು ಸಮಿತಿಯವರ ಗಮನಕ್ಕೆ ಬಂತು.
ಮೇಲಿನ ಮಹಡಿಯನ್ನು ಬೀಗ ಹಾಕಿ ಬಂದ್ ಮಾಡಲಾಗಿದೆ. ಅಲ್ಲಿ ಯಾವುದೇ ನಿರ್ವಹಣೆ ಇಲ್ಲದೆ ಜೇಡರ ಬಲೆಯಿಂದ ಆವರಿಸಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಈ ನಿಲ್ದಾಣದಲ್ಲಿ ಸ್ವಚ್ಛತೆ ನಿರ್ವಹಣೆ ಇಲ್ಲದಿರುವುದು ಸಮಿತಿಯ ಆಕ್ರೋಶಕ್ಕೆ ಕಾರಣವಾಯಿತು. ಉರಿ ಬಿಸಿಲಿನಲ್ಲೂ ಪ್ರಯಾಣಿಕರು ಬಸ್ ಕಾಯುತ್ತಿದ್ದರೂ ಫ್ಯಾನ್ ಹಾಕದಿರುವ ಬಗ್ಗೆಯೂ ಸಮಿತಿಯವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಸಹಾಯಕ ಸಂಚಾರ ವ್ಯವಸ್ಥಾಪಕಿ ನಿರ್ಮಲ, ಉಡುಪಿ ಡಿಪ್ಪೋ ಪ್ರಭಾರ ವ್ಯವಸ್ಥಾಪಕ ಅಶೋಕ್ ಹೆಗ್ಡೆ, ನಿಲ್ದಾಣದ ಸಂಚಾರ ನಿರೀಕ್ಷಕ ರವೀಂದ್ರ ಮೊದಲಾದವರು ಹಾಜರಿದ್ದರು.

