ಉಡುಪಿ: ಉಡುಪಿ ಜಿಲ್ಲೆಯಲ್ಲಿ ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಶ್ರೀಕೃಷ್ಣಮಠ, ಮಲ್ಪೆ ಬೀಚ್, ಮರವಂತೆ ಬೀಚ್, ಕಾಪು ಲೈಟ್ ಹೌಸ್, ಪಡುಬಿದ್ರಿ ಬೀಚ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಈ ಪ್ರವಾಸಿ ಸ್ಥಳಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕಟಪಾಡಿ ಸಮೀಪದ ಮಟ್ಟು ಬೀಚ್ ಕೂಡ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿದೆ. ಸ್ಥಳೀಯರು, ಮಣಿಪಾಲ ಕಾಲೇಜು ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಈ ಬೀಚ್ ಗೆ ಆಗಮಿಸುತ್ತಾರೆ. ಆದರೆ ಬೀಚ್ ನಲ್ಲಿರುವ ಮೂಲಸೌಕರ್ಯಗಳ ಕೊರತೆಯಿಂದ ಹೊರ ಜಿಲ್ಲೆ, ಹೊರರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಮುಖ ಮಾಡುತ್ತಿಲ್ಲ.
ಕಿರಿದಾದ ರಸ್ತೆ, ಎಲ್ಲೆಂದರಲ್ಲಿ ಕಸದ ರಾಶಿ, ಸೂಕ್ತ ಎಚ್ಚರಿಕೆ ಫಲಕಗಳು ಇಲ್ಲ. ಹಾಗೆಯೇ ಕುಳಿತು ವಿಶ್ರಾಂತಿ ಪಡೆಯುವ ಸಿಮೆಂಟ್ ನ ಆಸನಗಳು ತುಂಡಾಗಿ ಬಿದ್ದಿವೆ. ಬೀಚ್ ಪಕ್ಕದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯಗಳು ಬಿದ್ದುಕೊಂಡಿದ್ದು, ಇದರಿಂದ ಬೀಚ್ ಸೌಂದರ್ಯವೇ ಮಂಕಾಗಿದೆ.
ಸರಿಯಾದ ದಾರಿ ದೀಪಗಳು ಇಲ್ಲ. ಬೀಚ್ ನಲ್ಲಿ ಲೈಟ್ ನ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಈ ಎಲ್ಲ ಮೂಲಸೌಕರ್ಯಗಳ ಕೊರತೆಯಿಂದ ಮಟ್ಟು ಬೀಚ್ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದುಳಿದಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮಟ್ಟು ಬೀಚ್ ಅನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಬೆಳೆಸಬೇಕಿದೆ.
ಲೈಫ್ ಗಾರ್ಡ್, ಬೋಟಿಂಗ್, ವಾಟರ್ ಸ್ಪೋರ್ಟ್ಸ್ ಆರಂಭಿಸುವುದರ ಜೊತೆಗೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಆಗ ಮಾತ್ರ ಈ ಗ್ರಾಮೀಣ ಪ್ರದೇಶದ ಬೀಚ್ ಗೆ ಅಂತರಾಷ್ಟ್ರೀಯ ಮಾನ್ಯತೆ ಸಿಗುವ ಸಾಧ್ಯತೆ ಇದೆ.

