ಉಡುಪಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ (45) ಅವರನ್ನು ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆಗೈದಿರುವ ಪ್ರಕರಣವು ಕುಂದಾಪುರ ಜನತೆಯನ್ನು ಬೆಚ್ಚಿಬೀಳಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ಜಿಲ್ಲೆಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಡೆರಿಕ್ ಎಂಬಾತ ಮತ್ತು ಐವನ್ ನಡುವೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ಭಿನ್ನಾಭಿಪ್ರಾಯ ಉಂಟಾಗಿತ್ತು. ಗುರುವಾರ ರಾತ್ರಿ ಸುಮಾರು 11.45ಕ್ಕೆ ಡೆರಿಕ್ ದೂರವಾಣಿ ಕರೆ ಮಾಡಿ ಬಾಕಿ ಹಣದ ವಿಚಾರವಾಗಿ ಐವನ್ ಅವರೊಂದಿಗೆ ವಾಗ್ವಾದ ನಡೆಸಿದ್ದ ಎನ್ನಲಾಗಿದೆ. ಬಳಿಕ ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ಎದುರಿನ ಸ್ಥಳದ ವಿವರವನ್ನು ಐವನ್ ಅವರಿಗೆ ಕಳುಹಿಸಿ ಅಲ್ಲಿಗೆ ಬರಲು ಸವಾಲು ಹಾಕಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.
ಇದಾದ ಬಳಿಕ ಐವನ್, ತಮ್ಮೊಂದಿಗೆ ಇದ್ದ ಮಹಿಳೆ ಲಲಿತ ಅವರೊಂದಿಗೆ ಕಾರಿನಲ್ಲಿ ಸ್ಥಳಕ್ಕೆ ತೆರಳಿದ್ದರು. ಶುಕ್ರವಾರ ಮುಂಜಾನೆ ಸುಮಾರು 3.15ರ ವೇಳೆಗೆ ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಡೆರಿಕ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡು ಐವನ್ ಅವರ ಸೊಂಟದ ಕೆಳಭಾಗಕ್ಕೆ ತಗುಲಿದ್ದು, ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡು ಹಾರಿಸಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ತನಿಖೆಯ ವೇಳೆ, ಈ ಪ್ರಕರಣದ ಮೂಲದಲ್ಲಿ ಸುಮಾರು ₹1 ಲಕ್ಷದಿಂದ ₹1.5 ಲಕ್ಷದವರೆಗಿನ ಬಾಕಿ ಹಣದ ವಿವಾದ ಇದ್ದಿರುವ ಮಾಹಿತಿ ಲಭ್ಯವಾಗಿದೆ. ಕೆಲವು ತಿಂಗಳ ಹಿಂದೆ ವಿದೇಶಕ್ಕೆ ಕಳುಹಿಸುವುದಾಗಿ ಹೇಳಿ ಏಜೆಂಟ್ ಒಬ್ಬರು ₹27 ಲಕ್ಷ ವಂಚನೆ ನಡೆಸಿದ್ದ ಪ್ರಕರಣದಲ್ಲಿ ಹಣವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ಡೆರಿಕ್, ಐವನ್ ಅವರಿಗೆ ನೀಡಿದ್ದ ಎನ್ನಲಾಗಿದೆ. ಹಣ ವಸೂಲಾಗಿದ ನಂತರ ಆಯಕಟ್ಟಿನ ಮೊತ್ತವನ್ನು ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದೇ ವೈಮನಸ್ಸು ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
ಇದೇ ವೇಳೆ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಮೃತ ಐವನ್ ಮಸ್ಕರೇನಸ್ ವಿರುದ್ಧ 2014ರಲ್ಲಿ ಉಡುಪಿಯಲ್ಲಿ ನಡೆದ ರೌಡಿಶೀಟರ್ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ದಾಖಲೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರ ವೈಯಕ್ತಿಕ ಬದುಕಿನ ಕುರಿತೂ ತನಿಖೆ ನಡೆಯುತ್ತಿದ್ದು, ಕುಟುಂಬ ಸದಸ್ಯರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ತನಿಖೆ ಹಲವು ಆಯಾಮಗಳಲ್ಲಿ ನಡೆಯುತ್ತಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಸಮೀಪದಲ್ಲೇ ಆಸ್ಪತ್ರೆ ಇದ್ದರೂ ಗಾಯಾಳುವಿಗೆ ಚಿಕಿತ್ಸೆ ದೊರೆಯದಿರುವ ಕುರಿತು ಕೂಡ ತನಿಖೆ ನಡೆಸಲಾಗುತ್ತಿದ್ದು, ಪ್ರಕರಣದ ಎಲ್ಲ ಆಯಾಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

