ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆಪ್ಟೆಂಬರ್ 4 ಮತ್ತು 5ರಂದು ಉಡುಪಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೃಷ್ಣನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ.
ಸೆ.4ರಂದು ಕೃಷ್ಣನಿಗೆ ವಿವಿಧ ಬಗೆಯ ಪೂಜೆಗಳು ನೆರವೇರಲಿದ್ದು, ರಾತ್ರಿ ಅರ್ಘ್ಯ ಪ್ರದಾನ ನಡೆಯಲಿದೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಎರಡು ದಿನಗಳ ಕಾಲ ಹುಲಿವೇಷ ಸ್ಪರ್ಧೆ ಆಯೋಜಿಸಿರುವುದು ವಿಶೇಷವಾಗಿದೆ.
ಸೆ.5ರಂದು ಸಾಂಪ್ರದಾಯಿಕ ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಈ ಬಾರಿ ಉತ್ಸವದಲ್ಲಿ ಮಲ್ಲಯುದ್ಧ ವಿಶೇಷ ಆಕರ್ಷಣೆಯಾಗಲಿದೆ. ಶೀರೂರು ಮಠದ ಮುಂಭಾಗದಲ್ಲಿ ಮಲ್ಲಯುದ್ಧ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೃಷ್ಣನ ಮೃಣ್ಮಯ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಮಲ್ಲಯುದ್ಧ ಪ್ರದರ್ಶನಗೊಳ್ಳಲಿದೆ.
ವಿಟ್ಲಪಿಂಡಿಯ ದಿನ ಮಹಾಪೂಜೆಯ ಅನಂತರ ಊರಪರವೂರ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ಇದೆ.ಜೊತೆಗೆ ವಿಶೇಷ ಖಾದ್ಯಗಳ ಪ್ರಸಾದ ವಿತರಣೆ ನಡೆಯಲಿದೆ.ಸುಮಾರು ಒಂದೂವರೆ ಲಕ್ಷದಷ್ಟು ಚಕ್ಕುಲಿ,ತಲಾ 30 ಸಾವಿರದಷ್ಟು ಐದು ಬಗೆಯ ವಿವಿಧ ಉಂಡೆಗಳು. ಸುಮಾರು ಇಪ್ಪತ್ತು ಕ್ವಿಂಟಾಲ್ ಬೆಲ್ಲ ಮತ್ತು ಏಳು ಕ್ವಿಂಟಾಲ್ ಸಕ್ಕರೆ ಬಳಸಿದ ವಿವಿಧ ಭಕ್ಷ್ಯ ತಿನಿಸುಗಳು ಆ ದಿನದ ಪ್ರಸಾದ ವಿತರಣೆಯ ವಿಶೇಷ. ಅಲ್ಲದೆ ಸ್ಥಳೀಯ ಶಾಲೆಗಳಿಗೂ ಜನ್ಮಾಷ್ಟಮಿ ಪ್ರಸಾದ ವಿತರಿಸಲಾಗುತ್ತದೆ.ಇದಕ್ಕಾಗಿ ಒಟ್ಟು ಸುಮಾರು 80 ಬಾಣಸಿಗರು ಉಂಡೆ-ಚಕ್ಕುಲಿ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸರಳತ್ತಾಯ ,ಮಠದ ದಿವಾನರು

