ಉಡುಪಿ: ಇದೊಂದು ವಿಶೇಷವಾದ ವೇದಿಕೆ. ಜಗಮಗಿಸುವ ದೀಪಗಳಿಲ್ಲ. ಭರ್ಜರಿ ಭಾಷಣಗಳಿಲ್ಲ. ಹಾರ ತುರಾಯಿಗಳಿಲ್ಲ. ಬರೀ ಮಂದ ದೀಪಗಳ ಬೆಳಕಿನ ವೇದಿಕೆಯಲ್ಲಿ ಹಾಡು ಕೇಳುವ ಕಾರ್ಯಕ್ರಮ.

ಹೌದು… ಇಂತಹ ಕಾರ್ಯಕ್ರಮ ಆಯೋಜನೆಯಾಗಿದ್ದು ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವಠಾರದಲ್ಲಿ. ಕಾರ್ಯಕ್ರಮದ ಹೆಸರೇ ಕತ್ತಲೆ ಹಾಡು ಕರ್ನಾಟಕ ಯಾತ್ರೆ. ಖ್ಯಾತ ಗಾಯಕ ನಾದ ಮಣಿನಾಲ್ಕೂರು ಅವರು ಗಂಟೆಗಳ ಕಾಲ ಹಲವು ಗೀತೆಗಳನ್ನ ಪ್ರಸ್ತುತಪಡಿಸಿದರು. ಗಾಯಕ ನಾದ ಮಣಿನಾಲ್ಕೂರು ಅವರ ಕತ್ತಲೆ ಹಾಡು ವಿಶಿಷ್ಠ ಕಾರ್ಯಕ್ರಮ ನೆರೆದಿದ್ದ ಎಲ್ಲರ ಮನ ಸೆಳೆಯಿತು.

ಎಲ್ಲೆಡೆ ಅವರ ಧ್ವನಿಯಲ್ಲೇ ಜನಪ್ರಿಯವಾಗಿರುವ “ಗೆಲ್ಲುವುದು ಗೆಲುವಲ್ಲ” ಸೇರಿದಂತೆ ಹಲವು ಗೀತೆಗಳು ಕೇಳುಗರ ಮನ ಕಲಕಿದವು. ಹಾಡುಗಳೇ ಕೇಳುಗರೊಂದಿಗೆ ಸಂವಾದ ನಡೆಸಿದವು. ಸಂತ ಅನ್ನಮ್ಮ ಚರ್ಚ್ ತೊಟ್ಟಂ ಇದರ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ, ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆ ತೊಟ್ಟಂ ಹಾಗೂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಇವರ ಜಂಟಿ ಆಶ್ರಯದಲ್ಲಿ ನೇತೃತ್ವದಲ್ಲಿ ಕತ್ತಲ ಹಾಡು ಎಂಬ ವಿಶಿಷ್ಠ ಕಾರ್ಯಕ್ರಮದಲ್ಲಿ ಹಾಡುಗಳೊಂದಿಗೆ ಸಂವಾದ ನಡೆಸಲು ಒಂದು ಉತ್ತಮ ವೇದಿಕೆಯನ್ನು ಒದಗಿಸಿತು.

ಕತ್ತಲ ಹಾಡು” ಪರಿಕಲ್ಪನೆಯಲ್ಲಿ ತತ್ವಪದ, ದಾಸರ ಪದ, ಕಡಕೋಳ ಮಡಿವಾಳಪ್ಪರ ವಚನ, ಅಬ್ರಹಾಂ ಲಿಂಕನ್ ಬರೆದ ಪತ್ರ, ಜಿ.ಎಸ್.ಶಿವರುದ್ರಪ್ಪನವರ ಭಾವಗೀತೆ ಮಾತ್ರವಲ್ಲದೆ ಹೊಸ ತಲೆಮಾರಿನ ಕವಿತೆಗಳನ್ನು ನಾದಮಣಿಯವರು ಸುಮಾರು ಎರಡುವರೆ ಗಂಟೆಗಳ ಕಾಲ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ತೊಟ್ಟಂ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ರಂಗಭೂಮಿ ಸ್ವಾಂತ್ರ್ಯಪೂರ್ವ ದಿನಗಳಿಂದಲೂ ಆಡಳಿತ ನಡೆಸುವವರಿಗೆ ಪ್ರಶ್ನೆಗಳನ್ನು ಕೇಳಿದೆ ಹಾಗೂ ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಯೇಸು ಕ್ರಿಸ್ತ, ಬಸವಣ್ಣ, ಬುದ್ದ, ಕನಕದಾಸ ಇವರೆಲ್ಲರೂ ಅನ್ಯಾಯದ ವಿರುದ್ದ ದನಿ ಎತ್ತಿ, ಧಾರ್ಮಿಕ, ರಾಜಕೀಯ ನಾಯಕರಿಗೆ ಪ್ರಶ್ನೆಗಳನ್ನು ಹಾಕುವುದರ ಮೂಲಕ ಮಾದರಿಯಾದರು.

ಕಲ್ಮಶ ತುಂಬಿದ ಜಗತ್ತಿನಲ್ಲಿ ತಮ್ಮ ತಂಬೂರಿ ನಾದದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆ, ಸಹಿಷ್ಣುತೆ, ತ್ಯಾಗ, ಅಧ್ಯಾತ್ಮದ ಮಹತ್ವಗಳನ್ನು ಪ್ರಚುರಪಡಿಸುವ ವಿಶಿಷ್ಟ ಕಾಯಕವನ್ನು ನಾದಮಣಿ ನಾಲ್ಕೂರು ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಪ್ರಶ್ನೆ ಕೇಳುವ ಹಕ್ಕಿದ್ದು, ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷವನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗಿದ್ದು ಅದನ್ನು ಉಪಯೋಗಿಸೋಣ ಎಂದರು.

ಕಾರ್ಯಕ್ರಮದಲ್ಲಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸುಶ್ಮಾ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂ ರಮೇಶ್ ತಿಂಗಳಾಯ, ಸಾಮಾಜಿ ಸಂಪರ್ಕ ಸಾಧನಗಳ ಸಂಯೋಜಕರಾದ ಆಗ್ನೆಲ್ ಫೆರ್ನಾಂಡಿಸ್, ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಕ್ಲಾರೆನ್ಸ್ ಫೆರ್ನಾಂಡಿಸ್, ವಿನೋದ್, ಯಾದವ ಹಾಗೂ ಇತರರು ಉಪಸ್ಥಿತರಿದ್ದರು. ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.