ಉಡುಪಿ: ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿ ಆಧರಿಸಿ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಕರಡು ಅಧಿಸೂಚನೆಯ ಸಾಧಕ–ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸಿ, ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಸರ ಸೂಕ್ಷ್ಮ ಪ್ರದೇಶ (ಕಸ್ತೂರಿ ರಂಗನ್ ವರದಿ ಆಧಾರಿತ)ಕ್ಕೆ ಸಂಬಂಧಿಸಿದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಸ್ತೂರಿ ರಂಗನ್ ವರದಿ ಜಾರಿಯಿಂದ ಕಾಡಂಚಿನ ಜನರ ಜೀವನ ಹಾಗೂ ಜೀವನೋಪಾಯಕ್ಕೆ ತೊಂದರೆಯಾಗುವ ಆತಂಕವಿದೆ. ಮೂಲಸೌಕರ್ಯ ಅಭಿವೃದ್ಧಿಗೂ ಅಡ್ಡಿಯಾಗುವ ಸಾಧ್ಯತೆಯ ಬಗ್ಗೆ ಗೊಂದಲಗಳಿವೆ. ಮತ್ತೊಂದೆಡೆ ಪರಿಸರ ಸಂರಕ್ಷಣೆಯೂ ಆದ್ಯತೆಯಾಗಬೇಕು. ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕರಡು ಅಧಿಸೂಚನೆಯ ಪ್ರಕಾರ ಕಾರ್ಕಳ ತಾಲ್ಲೂಕಿನ 13 ಹಾಗೂ ಕುಂದಾಪುರ ತಾಲ್ಲೂಕಿನ 22 ಸೇರಿದಂತೆ ಜಿಲ್ಲೆಯ ಒಟ್ಟು 35 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರಲಿವೆ. ಸೂಕ್ಷ್ಮ ಪ್ರದೇಶದ ಮಧ್ಯಭಾಗದಲ್ಲಿಯೂ ವಸತಿ ಪ್ರದೇಶಗಳಿರುವುದರಿಂದ ಈ ಬಗ್ಗೆ ಕೂಲಂಕಷ ಪರಿಶೀಲನೆ ಅಗತ್ಯವಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಈಗಾಗಲೇ ಕಸ್ತೂರಿ ರಂಗನ್ ವರದಿ ಆಧರಿಸಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಏಳು ಬಾರಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಮಲೆಕುಡಿಯ, ಕೊರಗ ಸೇರಿದಂತೆ ಕಾಡಂಚಿನಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳಲ್ಲಿ ಆತಂಕ ಉಂಟಾಗಿದೆ. ಹಲವು ವರ್ಷಗಳಿಂದ ಪ್ರಕೃತಿಯೊಂದಿಗೆ ಸಮತೋಲಿತ ಜೀವನ ನಡೆಸುತ್ತಿರುವ ಈ ಜನರ ಹಿತವನ್ನೂ ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಕೃಷಿ, ಪರಿಸರ ಹಾಗೂ ಸಾರ್ವಜನಿಕರ ದೈನಂದಿನ ಬದುಕಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಮಗ್ರ ವಿಶ್ಲೇಷಣೆ ಅಗತ್ಯವಿದೆ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಜನಪರ ಕಾನೂನುಗಳು ಜನರ ಒಳಿತಿಗೆ ಅನುಗುಣವಾಗಿರಬೇಕು. ಪರಿಸರ ಸಂರಕ್ಷಣೆಯೊಂದಿಗೆ ಮುಂದಿನ ಪೀಳಿಗೆಯ ಬದುಕಿಗೂ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ಕರಡು ಅಧಿಸೂಚನೆಯನ್ನು ವಿರೋಧಿಸುತ್ತೇವೆ. ಜಿಲ್ಲೆಯ 35 ಗ್ರಾಮಗಳ ಜನರ ಬದುಕಿಗೆ ತೊಂದರೆಯಾಗದಂತೆ ಭೌತಿಕ ಸರ್ವೇ ನಡೆಸಿ, ವಾಸ್ತವಾಂಶಗಳ ವರದಿಯನ್ನು ಸರ್ಕಾರಕ್ಕೆ ಕಳುಹಿಸಬೇಕು. ಪರಿಸರ ಸೂಕ್ಷ್ಮ ವಲಯವನ್ನು ವಸತಿ ಪ್ರದೇಶಗಳಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳು ಹಾಗೂ ಸರ್ವೇ ನಂಬರ್ಗಳ ಬಗ್ಗೆ ನಿಖರ ಮಾಹಿತಿಯನ್ನು ಜನರಿಗೆ ನೀಡಬೇಕು. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ ಗಡಿ ಗುರುತಿಸಬೇಕು. ಗ್ರಾಮಮಟ್ಟದಲ್ಲಿ ಕರಡು ವರದಿ ಕುರಿತು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸುವುದು ಸೂಕ್ತ ಎಂದರು.
ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ವರದಿ ಜಾರಿಗೆ ಮುನ್ನ ಜನರಿಗೆ ಆಗುವ ತೊಂದರೆ, ಅನುಕೂಲ ಹಾಗೂ ಲಭ್ಯವಾಗುವ ಸೌಲಭ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಕಾಡಂಚಿನ ಜನರ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಹಾಗೂ ಅಗತ್ಯವಿದ್ದಲ್ಲಿ ಸುಪ್ರೀಂ ಕೋರ್ಟ್ನ ಗಮನಕ್ಕೆ ತರುವ ಜವಾಬ್ದಾರಿಯನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಡಿಎಫ್ಒ ರುಥ್ರೇನ್ ಪಿ., ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್ಪಿ ಸುಧಾಕರ್ ನಾಯಕ್, ಸಹಾಯಕ ಆಯುಕ್ತೆ ರಶ್ಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

