ಉಡುಪಿ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕವು ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನಡೆಯಲಿದೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಇದರ ಅಧ್ಯಕ್ಷ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು 2027ರ ಫೆ.18ರಿಂದ ಫೆ. 28ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿರುವುದಾಗಿ ಘೋಷಿಸಿದರು.

ಬಳಿಕ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರಕುಮಾರ್, ಮಸ್ತಕಾಭಿಷೇಕ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಇದುನಾಡಿನ ಸಮಸ್ತ ಬಂಧುಗಳು ಜಾತಿ,ಮತ, ಧರ್ಮದ ಬೇಧವಿಲ್ಲದೆ ನಡೆಸುವ ಹಬ್ಬ. ಈ ಮೂಲಕ ನಾವು ಮಾತ್ರ ಬೆಳೆಯುವುದಲ್ಲ, ಸಮಾಜ ಕೂಡ ಬೆಳೆಯಬೇಕು ಎಂದರು. 305 ದಿನಗಳು ಬಾಕಿ ಇವೆ. ಇದನ್ನು ನಾಡಿನ ಉತ್ಸವವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್, ನಮ್ಮ ಜೀವಿತಾ ವಧಿಯಲ್ಲಿ ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೋಮಟೇಶ್ವರನ ಮಸ್ತಕಾಭಿಷೇಕವನ್ನು ಕಣ್ಣುಂಬಿಕೊಳ್ಳುವ ಅವಕಾಶ ಸಿಗುತ್ತಿರುವುದು ನಮ್ಮ ಸೌಭಾಗ್ಯ, ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ದತೆ ಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದರು.

ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಮಹಾಮಸ್ತಕಾ ಭಿಷೇಕ ಧಾರ್ಮಿಕ ವಿಧಿ ವಿಧಾನದ ಜೊತೆಗೆ ಜಗತ್ತಿಗೆ ಒಳಿತಾಗಲಿ ಎನ್ನುವ ಮಹೋನ್ನತ ಉದ್ದೇಶವನ್ನೂ ಹೊಂದಿದೆ. ಈ ಪವಿತ್ರ ಕಾರ್ಯದ ಹಿಂದೆ ಭಾರತೀಯ ಸಂಸ್ಕೃತಿ, ಶ್ರದ್ದೆ, ಭಕ್ತಿಯ ಶಕ್ತಿಯ ಸಂದೇಶವಿದೆ. ಭಗವಾನ್ ಬಾಹುಬಲಿಯ ತ್ಯಾಗ ಮತ್ತು ವೈರಾಗ್ಯದ ಜೀವನ ನಮ್ಮ ಜೀವನಕ್ಕೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ಅದಾನಿ ಗ್ರೂಪ್ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯನಿರ್ವಾಹಕ ಟ್ರಸ್ಟಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಮಾಜಿ ಸಚಿವ ಅಭಯಚಂದ್ರ ಜೈನ್ ಶುಭ ಹಾರೈಸಿ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಎಎಸ್ಪಿ ಸುಧಾಕರ ನಾಯಕ್, ಸಮಿತಿಯ ಉಪಾಧ್ಯಕ್ಷ ಕೆ.ಪಿ.ಜಗದೀಶ್ ಅಧಿಕಾರಿ, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ಎಸ್‌ಸಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಸ್ತಕಾಭಿಷೇಕ ಸಮಿತಿ ಪದಾಧಿಕಾರಿಗಳಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ,

ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ.ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಗುಣಪಾಲ ಕಡಂಬ, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರವರ್ಮ ಜೈನ್, ಶಿಶುಪಾಲ ಜೈನ್, ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಮಂಗಳೂರು ಅತಿಥಿಗಳನ್ನು ಸ್ವಾಗತಿಸಿದರು. ಮೋಹನ್ ಪಡಿವಾಳ್ ವಂದಿಸಿ, ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.