ಉಡುಪಿ: ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ಉಡುಪಿ ಜಿಲ್ಲೆಯ ಕಾಪುವಿನ ಹೊಸ ಮಾರಿಗುಡಿಗೆ ಭೇಟಿ ನೀಡಿದರು. ಬಳಿಕ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, ನಮ್ಮ ದೇಶ ದೇವಭೂಮಿಯಾಗಿದೆ.
ಇಲ್ಲಿನ ಸಾವಿರಾರು ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಪ್ರಾಚೀನ ಮತ್ತು ಐತಿಹಾಸಿಕ ಪರಂಪರೆಯನ್ನು ವಿಶ್ವಕ್ಕೆ ಸಾರುತ್ತಿವೆ. ಕಲೆ, ವೇದ, ಉಪನಿಷತ್ತುಗಳನ್ನು ಉಳಿಸಿ ಬೆಳೆಸುವ ಆಶ್ರಯ ತಾಣವಾಗಿವೆ ಎಂದು ಕೊಂಡಾಡಿದರು.
ಕಂಗನಾ ಅವರು ಸೀರೆ ಉಟ್ಟು, ಹೂ ಮುಡಿದು ಅಪ್ಪಟ ಭಾರತೀಯ ನಾರಿಯಂತೆ ಧಾರ್ಮಿಕ ವೇದಿಕೆಗೆ ಬಂದು ಕಾರ್ಯಕ್ರಮದ ಕಳೆ ಹೆಚ್ಚಿಸಿದರು. ಬಳಿಕ ಮಾರಿಗುಡಿಗೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದರು. ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ, ಉಚ್ಚಂಗಿ ಸ್ವರ್ಣ ಪೀಠವನ್ನು ಕಂಡು ಪುಳಕಿತಗೊಂಡರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ದೇವರ ಪ್ರಸಾದ ನೀಡಿ ಗೌರವಿಸಿದರು. ಗೌರವಾಧ್ಯಕ್ಷ ರವಿ ಸುಂದರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮೊದಲಾದವರಿದ್ದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸ್ವರ್ಣ ಪೀಠದಲ್ಲಿ ಪ್ರತಿಷ್ಠಾಪನೆಗೊಂಡಿರುವ ಉಚ್ಚಂಗಿ ದೇವಿಗೆ ಇಂದು ವೈಭವದ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

