ಉಡುಪಿ: ಉಡುಪಿ ಆಟಿಸಂ ಸೊಸೈಟಿಯ ಆಶ್ರಯದಲ್ಲಿ ಆಟಿಸಂ ಮಕ್ಕಳಿಗಾಗಿ ‘ಕಲಾಸೌರಭ-3’ ಎಂಬ ವಿಶೇಷ ಕಾರ್ಯಕ್ರಮವನ್ನು ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಿ. ವಿದ್ಯಾಕುಮಾರಿ ಉದ್ಘಾಟಿಸಿ ಶುಭಹಾರೈಸಿದರು.

ಆಟಿಸಂ ಸೊಸೈಟಿ ಆಫ್ ಉಡುಪಿ ಅಧ್ಯಕ್ಷೆ ಡಾ. ಅಮಿತಾ ಪೈ ಅಧ್ಯಕ್ಷತೆ ವಹಿಸಿದ್ದರು. ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ ಭಂಡಾರಿ, ಐ.ಎಮ್.ಎ-ಉಡುಪಿ ಕರಾವಳಿ ಅಧ್ಯಕ್ಷ ಡಾ. ಸುರೇಶ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

10 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ವೃದ್ಧರವರೆಗಿನ ವಿಶೇಷ ಚೇತನರು ವಿವಿಧ ಹಾಡು, ನೃತ್ಯ ಹಾಗೂ ವಿವಿಧ ಪ್ರತಿಭಾ ಪ್ರದರ್ಶನದ ಮೂಲಕ‌ ನೆರೆದಿದ್ದ ಜನರನ್ನು ರಂಜಿಸಿದರು. ವಿಶೇಷ ಚೇತನರಿಗೆ ಸಂಬಂಧ ಎಂಬ ಪರಿಕಲ್ಪನೆ ನೀಡಲಾಗಿತ್ತು.

ಅದಕ್ಕೆ ಪೂರಕವಾಗಿ ಬೇರೆ ಬೇರೆ ಪ್ರತಿಭೆಗಳು ಅನಾವರಣಗೊಂಡವು. ಜಿಲ್ಲೆಯ ಬಹುತೇಕ ವಿಶೇಷ ಶಾಲೆಗಳ ಮಕ್ಕಳು, ಮಧ್ಯ ವಯಸ್ಕರು, ವೃದ್ದರು ಆದಿಯಾಗಿ ತಮ್ಮಲ್ಲಿರುವ ವಿವಿಧ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ವಿಶೇಷ ಚೇತನರು, ಆಟಿಸಂ ಪೀಡಿತ ಮಕ್ಕಳ ಹಾಗೂ ವಿವಿಧ ದೈಹಿಕ ಮಾನಸಿಕ ನ್ಯೂನತೆ ಇರುವ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ನೆರೆದಿದ್ದ ಪ್ರೇಕ್ಷಕರು ತಲೆದೂಗಿದರು.