ಉಡುಪಿ: ಕೇಂದ್ರದಿಂದ ಜನಗಣತಿ, ಜಾತಿಗಣತಿ ಆದೇಶ ವಿಚಾರವಾಗಿ ಉಡುಪಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಜಯಪ್ರಕಾಶ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.

ಬಹಳ ಸಮಯದಿಂದ ರಾಹುಲ್ ಗಾಂಧಿ ಇದನ್ನೇ ಒತ್ತಾಯ ಮಾಡುತ್ತಿದ್ದರು. ಕರ್ನಾಟಕ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿದ್ದೇವೆ. ಬರೀ ಜಾತಿ ಜನಗಣತಿಯಿಂದ ಮೀಸಲಾತಿ ಕೊಡುವುದು ಕಷ್ಟ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ತಿಳಿದರೆ ಮೀಸಲಾತಿ ಕೊಡುವುದು ಸುಲಭ. ಯಾರನ್ನು ಯಾವ ಪ್ರವರ್ಗಕ್ಕೆ ಹಾಕಬಹುದು ಎಂದು ನಿರ್ಧರಿಸಬಹುದು ಎಂದರು.

ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನ ಖುಷಿಯಾಗಿದೆ. ಹೈಕಮಾಂಡ್ ಒಪ್ಪಿದಾಗ ರಾಜ್ಯ ಬಿಜೆಪಿ ಒಪ್ಪಲೇಬೇಕು. ಕೇಂದ್ರ ಸರ್ಕಾರ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಂಡಾಗಿದೆ. ಯಾವುದು ವೈಜ್ಞಾನಿಕ ಅಲ್ಲ ಎಂಬುದಕ್ಕೆ ಕಾರಣ ದಾಖಲೆ ಕೊಡಬೇಕಾಗುತ್ತದೆ. ರಾಜ್ಯದ ಜಾತಿ ಗಣತಿ ವರದಿ ಬಗ್ಗೆ ಕ್ಯಾಬಿನೆಟ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಕಾದು ನೋಡೋಣ ಎಂದರು.

ಜಯಪ್ರಕಾಶ್ ಹೆಗ್ಡೆ ಅವರ ಸಮೀಕ್ಷಾ ವರದಿಯನ್ನು ಸದನದ ಮುಂದೆ ಮಂಡಿಸುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳುತ್ತಿದ್ದರು. ಬಿಜೆಪಿಯವರು ನಮ್ಮ ಸಮೀಕ್ಷಾ ವರದಿಯನ್ನು ತೆಗೆದುಕೊಳ್ಳಲೇ ಇಲ್ಲ. ವರದಿಯನ್ನು ತೆಗೆದುಕೊಂಡಿದ್ದರೆ ನಾವು ಅವತ್ತೇ ಸರಕಾರಕ್ಕೆ ಹಸ್ತಾಂತರ ಮಾಡುತ್ತಿದ್ದೆವು ಎಂದರು.

ಕಾಂತರಾಜು ಸಂಗ್ರಹ ಮಾಡಿದ ದತ್ತಾಂಶದ ಮೇಲೆ ನಾವು ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಕ್ಯಾಬಿನೆಟ್ ಮುಂದೆ ಈ ವರದಿಯನ್ನು ತೆಗೆದುಕೊಂಡು ಹೋಗಿದ್ದಾರೆ ಚರ್ಚೆ ಮಾಡಿ ತೀರ್ಮಾನಿಸುತ್ತಾರೆ. 2011ರಲ್ಲಿ ದೇಶದಲ್ಲಿ ಜನಗಣತಿಯಾಗಿತ್ತು ಈಗ 2025 ರಲ್ಲಿ ಆಗುತ್ತಿದೆ. ಈ ಅವಧಿಯಲ್ಲಿ ಅದೆಷ್ಟೋ ಚುನಾವಣೆಗಳು ನಡೆದು ಹೋಗಿದೆ. ವರದಿ ಬೇಗ ಬಿಡುಗಡೆ ಆಗಲಿ ಎಂಬುದು ನಮ್ಮ ಅಭಿಪ್ರಾಯ ಎಂದರು.

ನಮ್ಮ ಜವಾಬ್ದಾರಿಯನ್ನ ನಿರ್ವಹಿಸಿದ್ದೇವೆ ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರ. ವರದಿ ಮಂಡನೆ ಆಗಲಿ ಎಂಬುದು ನಮ್ಮ ಅಭಿಪ್ರಾಯ ಅದಕ್ಕಾಗಿ ಕಾಯುತ್ತಿದ್ದೇವೆ. ಕ್ಯಾಬಿನೆಟ್ ಒಪ್ಪಿಗೆ ಕೊಟ್ಟು ವರದಿಯನ್ನು ಸ್ವೀಕಾರ ಮಾಡಿದರೆ ಸರಕಾರಕ್ಕೆ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಆಗುತ್ತದೆ. ಎಲ್ಲಾ ರಾಜ್ಯಗಳು ಕರ್ನಾಟಕ ಮಾದರಿಯ ಗಣತಿಯನ್ನು ಮಾಡಬೇಕು ಎಂಬುದು ನನ್ನ ಒತ್ತಾಯ.

ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿ ಬಹಿರಂಗ ಆಗಬೇಕು. ಸಣ್ಣಪುಟ್ಟ ಜಾತಿಯವರಿಗೂ ಸೌಲಭ್ಯಗಳು ಸಿಗಬೇಕು. ಸಮ ಸಮಾಜವನ್ನು ನಿರ್ಮಾಣ ಮಾಡಲು ವರದಿ ಜಾರಿ ಅಗತ್ಯ. ಕೇಂದ್ರ ಸರ್ಕಾರ ಜಾತಿಗಣತಿಯಲ್ಲಿ ಯಾವ ವಿಭಾಗವನ್ನೆಲ್ಲ ಸರ್ವೆ ಮಾಡುತ್ತದೆ ಎಂದು ನೋಡಬೇಕು. ನಮ್ಮ ಅವರ ಗಣತಿಯಲ್ಲಿ ವ್ಯತ್ಯಾಸಗಳಿದ್ದರೆ ಅಪ್ಡೇಟ್ ಮಾಡಲು ಅವಕಾಶ ಇದೆ. ನಮ್ಮ ವರದಿಯನ್ನು ಸ್ವೀಕಾರ ಮಾಡಿದರೆ ಯಾವ ಜಾತಿಯು ತಪ್ಪಿ ಹೋಗೋದಿಲ್ಲ ಎಂದರು.