ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠ, ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ ವಿಭಾಗ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯುತ್ತಿರುವ ಮಂಡಲೋತ್ಸವದ ಜ್ಞಾನ ಮಂಡಲೋತ್ಸವ ಪ್ರಯುಕ್ತ ಸೆ.12ರಂದು ರಾಜಾಂಗಣದಲ್ಲಿ ಭಾರತೀಯ ಜ್ಞಾನ ಪರಂಪರೆ ಎನ್ನುವ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣಮಠ ಆವರಣದ ಗೀತಾಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶ್ರೀಪಾದರು, ಭಾರತೀಯ ಜ್ಞಾನ ಪರಂಪರೆಯನ್ನು ಇನ್ನಷ್ಟು ವಿಸ್ತರಿಸುವ ಭಾಗವಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಪ್ರಭಾವ ವಿಶೇಷವಾಗಿ ಮೊಬೈಲ್ ನಿಂದ ಮಾನವನ ಬುದ್ಧಿಶಕ್ತಿ ಕಡಿಮೆ ಬಳಕೆಯಾಗುತ್ತಿದೆ. ಬೌದ್ಧಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ. ಇಂತಹ ದಿನಗಳಲ್ಲಿ ಶ್ರೇಷ್ಠ ಭಾರತ ಪುನಃ ಜಾಗೃತವಾಗಬೇಕಜು ಎನ್ನುವ ನೆಲೆಯಲ್ಲಿ ಸಮ್ಮೇಳನ ನಡೆಯಲಿದೆ. ಭಾರತೀಯ ಜ್ಞಾನ ಪರಂಪರೆಯ ಚರ್ಚೆ, ವಿಷಯ ಮಂಡನೆ ಇತ್ಯಾದಿಗಳು ನಡೆಯಲಿದೆ ಎಂದರು.
ಉದ್ಘಾಟನ ಸಮಾರಂಭದಲ್ಲಿ ನಿಟ್ಟೆ ವಿವಿಯ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮಠದ ಆಸ್ಥಾನ ವಿದ್ವಾಂಸರಾದ ಕೇಶವ ರಾವ್ ತಾಡಪತ್ರಿ ಸಮ್ಮೇಳನಾಧ್ಯಕ್ಷರಾಗಿರಲಿದ್ದಾರೆ. ಸಂಸ್ಕೃತ ವಿವಿ ಕುಲಪತಿ ಪ್ರೊ. ಅಹಲ್ಯಾ ಎಸ್., ಹಿರಿಯ ವಿಜ್ಞಾನಿ ಡಾ. ಪ್ರಹ್ಲಾದ್ ರಾಮ್‌ರಾವ್ ಸಹಿತ ವಿವಿಧ ಕ್ಷೇತ್ರದ ಹಲವು ಪಾಲ್ಗೊಳ್ಳಲಿದ್ದಾರೆ ಎಂದರು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಮಾತನಾಡಿ, ಭಾರತೀಯ ಜ್ಞಾನ ಪರಂಪರೆಯ ವಿವಿಧ ಶಾಖೆಗಳ ಸಮಗ್ರ ವಿಷಯಗಳ ಚರ್ಚೆ, ಸಂವಾದ ಹಾಗೂ ವಿಚಾರ ಮಂಡನೆ ಇತ್ಯಾದಿಗಳು ನಡೆಯಲಿದೆ. ಇದರಲ್ಲಿ ಎಲ್ಲ ಆಯಾಮದ ಚರ್ಚೆಯೂ ನಡೆಯಲಿದೆ ಎಂದರು.
ನಿಟ್ಟೆ ವಿವಿ ಭಾರತೀಯ ಜ್ಞಾನ ವ್ಯವಸ್ಥೆ ವಿಭಾಗ ಮುಖ್ಯಸ್ಥ ಡಾ. ಸುಧೀರ್ ರಾಜ್ ಮಾತನಾಡಿ, ಕೇಂದ್ರ ಸರಕಾರ ಜಾರಿ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಸಮ್ಮೇಳನ ರೂಪಿಸಲಾಗಿದೆ. ಸುಮಾರು 25 ಉಪ ವಿಷಯಗಳಲ್ಲಿ ಪ್ರಬಂಧ ಮಂಡನೆಯಾಗಲಿದೆ ಎಂದರು.
ಶ್ರೀ ವಾದಿರಾಜ ಸಂಶೋಧನ ಫೌಂಡೇಶನ್ ನ ಡಾ। ಬಿ. ಗೋಪಾಲಾಚಾರ್ಯ ಮಾತನಾಡಿ, ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀಪಾದದ್ವಯರ ಉಪಸ್ಥಿತಿಯಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಉದ್ಘಾಟನೆ, ಅನಂತರ ವಿವಿಧ ಗೋಷ್ಠಿಗಳು, ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು ಡಾ। ತನ್ಮಯ ಗೋಸ್ವಾಮಿ, ಆರ್. ಕೃಷ್ಣರಾಜ್, ಡಾ। ದೇವಿದಾಸ್ ನಾಯ್ಕ್ ಮೊದಲಾದರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿಟ್ಟೆ ವಿವಿ ಎಂಬಿಎ ವಿಭಾಗದ ನಿರ್ದೇಶಕ ಸುಧೀರ್ ಎಂ. ಇದ್ದರು.

