ಉಡುಪಿ: ಉಡುಪಿಯ ಉದ್ಯಾವರದ ವಿಜಯ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿರುವ ಉಡುಪಿ ಗ್ಯಾರೇಜ್ ಮಾಲಕರ ಮತ್ತು ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನ. 2ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಮಣಿಪಾಲ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ರೇವಿಯರ್ ಕ್ಯಾಥಲಿಕ್ ಚರ್ಚ್ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಲದ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೂತನ ಸಂಘವನ್ನು ಉದ್ಘಾಟಿಸಲಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ರಘುಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಆರಂಭ ವರ್ಷದ ಪ್ರಯುಕ್ತ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರವನ್ನು ನೀಡಲಾಗುತ್ತದೆ. 1 ವರ್ಷದ ಅವಧಿಯ ಠೇವಣಿಗೆ ಶೇ.10, 5 ವರ್ಷಗಳ ವಿಶೇಷ ಠೇವಣಿಗೆ ಶೇ.11 ಹಾಗೂ ಹಿರಿಯ ನಾಗರಿಕರಿಗೆ ಶೇ.0.5 ಹೆಚ್ಚುವರಿ ಬಡ್ಡಿದರ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜೇಶ್ ಎಸ್. ಜತ್ತನ್, ನಿರ್ದೇಶಕರಾದ ರೋಷನ್ ಬಿ. ಕರ್ಕಡ ಕಾಪು, ಎಸ್.ಜಿ. ಕೃಷ್ಣ ಕಟಪಾಡಿ, ವಿನಯ ಕುಮಾರ್ ಕಲ್ಯಾಡಿ ಉಪಸ್ಥಿತರಿದ್ದರು.

