ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಭಾರೀ ಗಾಳಿಮಳೆಯ ಆವಾಂತರಕ್ಕೆ ಉಡುಪಿ ಹಾಗೂ ಮಣಿಪಾಲ ನಲುಗಿ ಹೋಗಿದ್ದು, ವಾಹನ ಸಂಚಾರ ಹಾಗೂ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಉಡುಪಿ -ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಮಣಿಪಾಲ ಐನಾಕ್ಸ್‌ನಿಂದ ಸಿಂಡಿಕೇಟ್ ಸರ್ಕಲ್ ಮಧ್ಯೆ ಸಿಗುವ ರಸ್ತೆಯ ಬದಿಗೆ ತುಂಬಿಸಲಾಗಿದ್ದ ಮಣ್ಣು ಭಾರೀ ಮಳೆಗೆ ಕಿತ್ತುಹೋಗಿದೆ. ಇದರಿಂದ ರಸ್ತೆ ಬದಿ ಬೃಹತ್ ತೋಡು ಸೃಷ್ಠಿಯಾಗಿದೆ. ಇಲ್ಲಿನ ಮಣ್ಣು, ಕಲ್ಲು ಮಳೆಯ ನೀರಿನೊಂದಿಗೆ ಲಕ್ಷ್ಮೀಂದ್ರನಗರದ ಕಡೆ ಹರಿದು ಬಂದಿದ್ದು, ಇಡೀ ರಸ್ತೆ ಕೆಸರು ಮಯವಾಗಿದೆ.

ಕೆಸರು ಮಣ್ಣಿನೊಂದಿಗೆ ಕಲ್ಲುಗಳು ಕೂಡ ರಸ್ತೆಯಲ್ಲಿ ಬಂದು ಬಿದ್ದಿವೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಕೆಲವೊತ್ತು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು. ಕೆಸರು ನೀರು ತೋಡಿನಿಂದ ಉಕ್ಕಿ ಹರಿದು ಬಂದು ಲಕ್ಷ್ಮೀಂದ್ರ ನಗರದ ಅಂಗಡಿಗಳಿಗೆ ನುಗ್ಗಿವೆ. ಅಲ್ಲದೆ ಐನಾಕ್ಸ್ ಸಮೀಪದ ಸೆಂಟ್ರಲ್ ಪಾರ್ಕ್ ಸಂಕೀರ್ಣದ ಕೆಳ ಅಂತಸ್ತಿನಲ್ಲಿರುವ ಅಂಗಡಿಗಳಿಗೆ ಕೆಸರು ನೀರು ಹಾಗೂ ಮಣ್ಣುಗಳು ನುಗ್ಗಿವೆ. ಇದರಿಂದ ಅಪಾರ ಹಾನಿ ಸಂಭವಿಸಿದೆ. ತಕ್ಷಣ ನಗರಸಭೆ ಸಿಬ್ಬಂದಿಗಳು ಆಗಮಿಸಿ ಜೆಸಿಬಿ ಮೂಲಕ ತೋಡು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ಉಡುಪಿ ನಗರದ ಕೆಲವು ರಸ್ತೆಗಳಲ್ಲಿಯೂ ನೀರು ಆವರಿಸಿದ್ದು, ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಳೆಯಿಂದ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಹೊರ ಜಿಲ್ಲೆ ಹಾಗೂ ರಾಜ್ಯಗಳ ಭಕ್ತರು ತೀರಾ ತೊಂದರೆ ಅನುಭವಿಸಿದರು. ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಮಳೆ ನೀರು ರಸ್ತೆಯಲ್ಲಿ ನಿಂತು ಸಮಸ್ಯೆ ಉಂಟಾಯಿತು.